ಬೆಂಗಳೂರು: ಶಾಸಕ ಹರೀಶ್ ಪೂಂಜಾ ಆಡಿದ ಒಂದೇ ಒಂದು ಮಾತು ಅವರ ಶಾಸಕ ಸ್ಥಾನಕ್ಕೆ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಶಾಸಕ ಹರೀಶ್ ಪೂಂಜಾ ಅವರು ಸ್ಪೀಕರ್ ಯು.ಟಿ ಖಾದರ್ ಅವರ ಧರ್ಮದ ಕುರಿತು ಹೇಳಿಕೆ ನೀಡಿರುವುದು, ಕಾಂಗ್ರೆಸ್ ಶಾಸಕರನ್ನು ಕೆರಳಿಸಿದ್ದು, ಹಕ್ಕುಚ್ಯುತಿ ಮಂಡಿಸಲು ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಹರೀಶ್ ಪೂಂಜಾ ಇತ್ತೀಚೆಗೆ ಯು.ಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭ ʻಸ್ಪೀಕರ್ ಮುಸ್ಲಿಂʼ ಎಂದು ಹೇಳಿದ್ದಾಗಿ ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ.
ಕಳೆದ ಮಾರ್ಚ್ 21, 2025. ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು, ಗದ್ದಲಕ್ಕೆ ಕಾರಣವಾಗಿದ್ದು, ಇದರ ಕುರಿತು ಆಗಾಗ ಬಿಸಿ ಬಿಸಿ ಚರ್ಚೆಗಳಾಗುತ್ತಿದೆ. ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಎನ್ನುವ ಹೋರಾಟ ಬಿಜೆಪಿ ಇಳಿದಿದ್ದು, ಅಮಾನತು ಆದೇಶ ತೆರವುಗೊಳಿಸುವಂತೆ ಸ್ಪೀಕರ್‌ಗೆ ಮನವಿಯನ್ನೂ ಮಾಡಲಾಇದೆ. ಇದರ ಮಧ್ಯೆ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ಎದುರಾಗಿದೆ.
ಕಾಂಗ್ರೆಸ್ ಶಾಸಕರು ಹರೀಶ್ ಪೂಂಜಾ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ವಿಧಾನಸಭಾಧ್ಯಕ್ಷರ ಧರ್ಮ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾಂಗ್ರೆಸ್ ಶಾಸಕರು ಅಕ್ಷರಶಃ ಗರಂ ಆಗಿದ್ದು, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ಣ ಸೇರಿ ಕೆಲ ಶಾಸಕರು ಹರೀಶ್ ಪೂಂಜಾ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ದೂರು ನೀಡಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಸ್ಪೀಕರ್ ಧರ್ಮದ ವಿಚಾರ ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಹಕ್ಕು ಭಾಧ್ಯತಾ ಸಮಿತಿ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು ಈ ದೂರನ್ನು ಪರಿಶೀಲನೆ ನಡೆಸಲಿದ್ದಾರೆ.
ಇದು ಸ್ಪೀಕರ್ ಯು.ಟಿ ಖಾದರ್ ವಿರುದ್ಧದ ವಿಚಾರ ಆಗಿರುವುದರಿಂದ ಈ ದೂರನ್ನು ಹಕ್ಕು ಭಾದ್ಯತೆ ಸಮಿತಿ ಸಭಾಧ್ಯಕ್ಷ ಯು.ಟಿ ಖಾದರ್‌ಗೆ ರವಾನೆ ಮಾಡುವ ಸಾಧ್ಯತೆ ಇದೆ. ಈ ರೀತಿಯ ಪ್ರಕರಣಗಳಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಗರಿಷ್ಠ ಶಾಸಕ ಸ್ಥಾನದಿಂದ ವಜಾಗೊಳಿಸುವವರೆಗೆ ನಿಯಮಗಳಿವೆ. ಇದೀಗ ಶಾಸಕ ಹರೀಶ್ ಪೂಂಜಾ ಪ್ರಕರಣದಲ್ಲಿ ಸ್ಪೀಕರ್ ಏನು ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.