ಎ.25ರಿಂದ 27ರ ತನಕ ರಾಷ್ಟ್ರೀಯ ಕಾನೂನು ಹಬ್ಬ ʻಲೆಕ್ಸ್ ಅಲ್ಟಿಮಾ 2025ʼ

ಮಂಗಳೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇಲ್ಲಿ ದಿನಾಂಕ 25 ಎಪ್ರಿಲ್ 2025 ರಿಂದ 27 ಎಪ್ರಿಲ್ 2025 ರವರೆಗೆ ಮೂರು ದಿನಗಳ ಕಾಲ ರಾಷ್ಟ್ರೀಯ ಕಾನೂನು ಹಬ್ಬ ʻಲೆಕ್ಸ್ ಅಲ್ಟಿಮಾ 2025ʼ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ  ತಾರಾನಾಥ್ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು, ಮಹಾವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘಗಳ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ದಿನಾಂಕ 25-04-2025 ರಂದು ಪೂರ್ವಾಹ್ನ ಗಂಟೆ 10.00 ಕ್ಕೆ ಉದ್ಘಾಟನೆಗೊಳ್ಳಲಿದ್ದು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಹುಬ್ಬಳ್ಳಿ ಇದರ ಮಾನ್ಯ ಕುಲಪತಿಗಳಾದ ಪ್ರೊ.(ಡಾ.) ಸಿ. ಬಸವರಾಜು ರವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.

ಮಂಗಳೂರಿನ ಹಿರಿಯ ವಕೀಲರು, ನೋಟರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ. ಅಕ್ಷತಾ ಆದರ್ಶ್, ಸರಕಾರಿ ಕಾನೂನು ಕಾಲೇಜು, ತ್ರಿಶೂರು, ಕೇರಳ ಇಲ್ಲಿಯ ಪ್ರಾಂಶುಪಾಲರಾಗಿರುವ ಪ್ರೊ (ಡಾ.) ಸೋನಿಯಾ ಕೆ.ದಾಸ್, ಕಾಲೇಜಿನ ಪ್ರಾಂಶುಪಾಲರಾದ ಡಾ.ತಾರಾನಾಥ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮವು 27-04-2025 ರಂದು ಸಂಜೆ 4.30ಕ್ಕೆ ಸಮಾರೋಪಗೊಳ್ಳಲಿದ್ದು ಕರ್ನಾಟಕ ಉಚ್ಚ ನ್ಯಾಯಾಲಯದ ಘನತೆವೆತ್ತ ನ್ಯಾಯಾಧೀಶರಾದ ಮಾನ್ಯ ಮರಳೂರು ಇಂದ್ರಕುಮಾರ್ ಅರುಣ್ ರವರು ಪ್ರಮುಖ ಅಭ್ಯಾಗತರಾಗಿರುತ್ತಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾನೂನು ಸ್ಪರ್ಧೆಯಲ್ಲಿ ರಾಷ್ಟ್ರದ ಪ್ರತಿಷ್ಠಿತ ಕಾನೂನು ಕಾಲೇಜುಗಳು ಭಾಗವಹಿಸಲಿದ್ದು, ಕಾನೂನು ರಸ ಪ್ರಶ್ನೆ, ತೀರ್ಪು ಬರೆಯುವ ಸ್ಪರ್ಧೆ, ಕಕ್ಷಿದಾರನೊಂದಿಗೆ ಸಂವಾದ ಹಾಗೂ ಅನುಸಂಧಾನ, ಸಾಕ್ಷಿಗಳ ವಿಚಾರಣೆ ಮತ್ತು ಜಾಮೀನು ಅರ್ಜಿ ವಿಚಾರಣೆ ಮುಂತಾದ ಸ್ಪರ್ಧೆಗಳು ನಡೆಯಲಿದೆ ಎಂದು ತಾರನಾಥ್‌ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಾಲೇಜ್‌ನ ಸುಮಾ, ಶ್ರೀವರ, ಅಶ್ವಿನಿ ಅರಸ್, ಮುಹಮ್ಮದ್ ಫೈಝಲ್ ಉಪಸ್ಥಿತರಿದ್ದರು.

error: Content is protected !!