ಕಾಲೇಜ್‌ ಕ್ಯಾಂಪಸ್‌ನಲ್ಲಿ ಗಾಂಜಾ ಘಮಲು?: ಇಬ್ಬರು ವಶಕ್ಕೆ

ಸುಳ್ಯ: ಗಾಂಜಾ ಸೇವಿಸಿದ್ದಲ್ಲದೆ ಅದನ್ನು ಮಾರಾಟ ಮಾಡಿದ ಗುಮಾನಿಯ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಸುಳ್ಯದ ಕುರುಂಜಿಭಾಗ್ ಎಂಬಲ್ಲಿ ನಡೆದಿದೆ.

ಇಲ್ಲಿನ ಖಾಸಗಿ ಕಾಲೇಜು ಸಮುಚ್ಚಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವೊಂದು ಕಿಡಿಗೇಡಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ಅಲ್ಲದೆ ಇದರಿಂದಾಗಿ ಆಗಾಗ್ಗೆ ಈ ಪ್ರದೇಶದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿತ್ತು. ಹೀಗಾಗಿ ಈ ಬಗ್ಗೆ ನಿಖರ ಮಾಹಿತಿ ಪಡೆದ ಸುಳ್ಯ ಪೊಲೀಸರು ದಿಢೀರ್‌ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಮಾಹಿತಿ ಇನ್ನೂ ಲಭಿಸಿಲ್ಲ. ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟರೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕಾಲೇಜು ಕ್ಯಾಂಪಸ್ ಸಮೀಪದ ಹೋಟೆಲ್ಗಳಲ್ಲಿ ಮದ್ಯ ಮಾರಾಟ ಹಾಗೂ ಗೂಡು ಅಂಗಡಿಗಳಲ್ಲಿ ಗಾಂಜಾ ಹಾಗು ಇನ್ನಿತರ ಅಮಲು ಸೇವನೆಗಳ ಮಾರಾಟ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಸಂದರ್ಭಗಳು ಎದುರಾಗಬಹುದು ಎಂದು ‌ಸ್ಥಳೀಯರು ತಿಳಿಸಿದ್ದಾರೆ.

error: Content is protected !!