ಬೆಂಗಳೂರು: ಬಿಜೆಪಿ ಉಚ್ಛಾಟಿತ ಬಸನ ಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಬಿಜೆಪಿ ಮುಖಂಡರು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ವಿಶೇಷವೆಂದರೆ ಈ ಇಬ್ಬರು ಮುಖಂಡರು ಯತ್ನಾಳ್ ಅವರೊಂದಿಗೆ ಸೇರಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಈ ನಾಯಕರು ಕೂಡ ತೊಡೆ ತಟ್ಟಿದ್ದರು. ಆದರೆ ಯತ್ನಾಳ್ ಅವರ ಉಚ್ಛಾಟನೆ ಬಳಿಕ ಕೆಲವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾತು ಕೂಡ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಆ ಬಣದಲ್ಲಿದ್ದ ಒಬ್ಬರು ಪ್ರಮುಖ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಸಂಚಲನ ಸೃಷ್ಟಿಸಿದೆ.
ಬಿಜೆಪಿ ಮುಖಂಡರಾದ ಜಿ.ಎಂ.ಸಿದ್ದೇಶ್ವರ್ ಹಾಗೂ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಡಿಸಿಎಂ ಗೃಹಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸೌಜನ್ಯದ ಭೇಟಿ ಎಂದು ಎನಿಸಿದರೂ ಬಿಜೆಪಿ ನಾಯಕರು ಅದರಲ್ಲೂ ಯತ್ನಾಳ್ ಬಣದಲ್ಲೇ ಗುರುತಿಸಿಕೊಂಡಿರುವ ಈ ಇಬ್ಬರೂ ನಾಯಕರು ಒಟ್ಟಿಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರದ ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರಾದ ಜಿ.ಎಂ.ಸಿದ್ದೇಶ್ವರ ಹಾಗೂ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ನನ್ನನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಎಂದು ಡಿಕೆಶಿ ಫೋಟೋ ಹಂಚಿಕೊಂಡಿದ್ದಾರೆ.
ಇದರ ಬೆನ್ನಲ್ಲೆ ರಾಜಕೀಯ ಚರ್ಚೆಗಳು ಗರಿಗೆದರಿವೆ. ಕೆಲವು ವಾರದ ಹಿಂದೆಯಷ್ಟೇ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಬಿಜೆಪಿ ಉಚ್ಛಾಟಿಸಿತ್ತು. ಬೆಂಗಳೂರಿನ ಯು.ಬಿ.ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸಕ್ಕೆ ತೆರಳಿ ಮಹತ್ವದ ಚರ್ಚೆ ಕೂಡ ಯತ್ನಾಳ್ ನಡೆಸಿದ್ದರು. ಈ ಗೌಪ್ಯ ಸಭೆಯಲ್ಲಿ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಸೇರಿದ್ದರು.
ಯತ್ನಾಳ್ ಉಚ್ಛಾಟನೆ ತೆರವುಗೊಳಿಸುವ ಸಂಬಂಧ ಹಾಗೂ ಈ ಬಗ್ಗೆ ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವ ಕುರಿತು ಯತ್ನಾಳ್ ಬಣದ ನಾಯಕರು ಚರ್ಚೆ ನಡೆಸಿದ್ದರು. ಬಳಿಕ ಹೊಸ ಪಕ್ಷ ಕಟ್ಟುವ ಸುಳಿವನ್ನೂ ಯತ್ನಾಳ್ ನೀಡಿದರು. ಇನ್ನು ಬಿಪಿ ಹರೀಶ್ ಕೂಡ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯೋಗ್ಯರಲ್ಲ ಎಂದೇ ಬಹಿರಂಗ ಹೇಳಿಕೆ ನೀಡಿದ್ದರು. ಯತ್ನಾಳ್ ಬೆನ್ನಿಗೆ ನಿಂತಿದ್ದ ಹರೀಶ್ ಉಚ್ಛಾಟನೆ ಬಳಿಕ ಪ್ರತಿಕ್ರಿಯಿಸಿದ್ದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತು ಕಡಿಮೆ ಮಾಡಿಕೊಂಡರೆ ರಾಜ್ಯದ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಬಿಪಿ ಹರೀಶ್ ಬ್ಯಾಟಿಂಗ್ ಮಾಡಿದ್ದರು. ಯತ್ನಾಳ್ ದೊಡ್ಡ ಹಿಂದೂ ಸಂಘಟಕರು. ಇದು ರಾಜ್ಯದ ಜನರಿಗೂ ಗೊತ್ತಿದೆ. ಅವರು ಮಾತು ಕಡಿಮೆ ಮಾಡಿಕೊಳ್ಳಬೇಕು ಎಂದು ಎಲ್ಲರೂ ಹೇಳುತ್ತಾರೆ ಎಂದಿದ್ದರು. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಎನ್ನುತ್ತಿದ್ದ ಹರೀಶ್ ಅವರು ಕೂಡ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.