ಮುಂಬೈ: ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಉರ್ವಶಿ ರೌಟೇಲಾ ನೀಡಿರುವ ಹೇಳಿಕೆಗೆ ಅರ್ಚಕರು ಸಿಡಿದೆದ್ದಿದ್ದು, ಆಕೆಯ ವಿರುದ್ಧ ತೀವ್ರ ತಪರಾಕಿ ಹಾಕಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಉರ್ವಶಿ ರೌಟೇಲಾ ಸಂದರ್ಶನವೊಂದರಲ್ಲಿ ʻಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ, ಅದರ ಹೆಸರು ಊರ್ವಶಿ. ಮತ್ತು ಇದು ನನಗೆ ಸಮರ್ಪಿಸಲಾಗಿದೆʼ ಎಂಬ ಹೇಳಿಕೆಯೇ ಅರ್ಚಕರು ಕೆಂಡಾಮಂಡಲರಾಗಲು ಕಾರಣ.
ಅಷ್ಟೇ ಅಲ್ಲ ನಾನು ಈಗಾಗಲೇ ದಕ್ಷಿಣ ಭಾರತದಲ್ಲಿ ಮೆಗಾ ಸ್ಟಾರ್ ಚಿರಂಜೀವಿ , ಪವನ್ ಕಲ್ಯಾಣ್ ನಂತರ ನಾನು ಬಾಲಯ್ಯ ಜೊತೆ ಕೆಲಸ ಮಾಡಿದೆ. ಈಗ ನನ್ನ ಒಂದೇ ಆಸೆ ಏನೆಂದರೆ, ಅವರಿಗಾಗಿ ದೇವಾಲಯಗಳಿದ್ದರೆ, ದಕ್ಷಿಣದಲ್ಲಿರುವ ನನ್ನ ಅಭಿಮಾನಿಗಳಿಗಾಗಿ, ನನಗಾಗಿ ಅಲ್ಲೂ ಇಂತಹದ್ದೇನಾದರೂ ಆಗಬೇಕು ಎಂದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದುಊರ್ವಶಿ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಬದ್ರಿನಾಥ ಮಂದಿರದ ಪೂಜಾರಿಗಳು ಸಹ ಊರ್ವಶಿ ವಿರುದ್ಧ ಕಿಡಿ ಕಾರಿದ್ದಾರೆ.
ಸಿಧಾರ್ಥ್ ಜೊತೆಗಿನ ಪೋಡಕಾಸ್ಟ್ ನಲ್ಲಿ ಊರ್ವಶಿ ಬದ್ರಿನಾಥದ ಬಳಿ ನನ್ನ ಹೆಸರಿನ ದೇಗುಲ ಇದೆ, ಜನರು ಅಲ್ಲಿ ಹೋಗಿ ಪ್ರಾರ್ಥನೆ ಮಾಡುತ್ತಾರೆ. ನನ್ನನ್ನು ಜನರು ದಂದಮಾ ಮಾಯಿ ಎನ್ನುತ್ತಾರೆ. ಪ್ರತಿ ಹೆಣ್ಣು ಕೂಡ ದೇವಿಯ ರೂಪ ಎಂದು ಹೇಳಿದ್ದರು. ಈ ಹೇಳಿಕೆ ವೈರಲ್ ಆದ ಬಳಿಕ ಊರ್ವಶಿ ಹೇಳಿದ್ದು ನಿಜವೇ ಎನ್ನುವ ಕುರಿತು ಭಾರಿ ಚರ್ಚೆ ನಡೆದಿದ್ದು, ಇದೀಗ ಊರ್ವಶಿ ಹೇಳಿದ್ದೆಲ್ಲಾ ಸುಳ್ಳು ಅನ್ನೋದು ತಿಳಿದು ಬಂದಿದೆ. ಉತ್ತರಾಖಂಡದ ಬದ್ರಿನಾಥ ಮಂದಿರದ ಬಳಿ ಊರ್ವಶಿ ಹೆಸರಿನ ಮಂದಿರ ಇರೋದು ನಿಜಾ. ಆದರೆ ಇದು ಊರ್ವಶಿ ರೌಟೇಲಾಗೆ ಮೀಸಲಾದ ಮಂದಿರ ಅಲ್ಲ. ಬದಲಾಗಿ ದೇವಿ ಊರ್ವಶಿಗೆ ಮೀಸಲಾದ ಮಂದಿರವಾಗಿದೆ ಎಂದು ಅಲ್ಲಿನ ಪೂಜಾರಿಗಳೇ ಸ್ಪಷ್ಟ ಪಡಿಸಿದ್ದಾರೆ.
ಮಾ ಊರ್ವಶಿ ದೇವಸ್ಥಾನವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾಮ್ನಿ ಗ್ರಾಮದಲ್ಲಿದೆ. ಬಾಮ್ನಿ ಗ್ರಾಮವು ಬದರಿನಾಥ ಧಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಬದರಿನಾಥ ಧಾಮಕ್ಕೆ ಬರುವ ಹೆಚ್ಚಿನ ಯಾತ್ರಿಕರು ಈ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ಜನಪ್ರಿಯ ಕಥೆಗಳಿವೆ. ಒಂದು ನಂಬಿಕೆಯ ಪ್ರಕಾರ, ಮಾತಾ ಸತಿಗೆ ಮುಕ್ತಿ ನೀಡಲು ಆಕೆಯ ದೇಹವನ್ನು ಸುದರ್ಶನ ಚಕ್ರವನ್ನು ಬಳಸಿ ತುಂಡರಿಸಲಾಯಿತು. ಈಗ ಊರ್ವಶಿ ದೇವಸ್ಥಾನ ಇರುವ ಜಾಗದಲ್ಲಿ ಕೂಡ ಸತಿ ದೇವಿಯ ದೇಹದ ಒಂದು ತುಂಡು ಬಿದ್ದಿದೆ ಎಂದು ಹೇಳಲಾಗುತ್ತೆ.
ಇನ್ನೊಂದು ನಂಬಿಕೆಯ ಪ್ರಕಾರ, ವಿಷ್ಣು ಬದರಿನಾಥದಲ್ಲಿ ತಪಸ್ಸು ಮಾಡುತ್ತಿದ್ದಾಗ, ಅವರ ತೀವ್ರ ಧ್ಯಾನದ ಫಲವಾಗಿ, ಅವರ ತೊಡೆಯಿಂದ ಅತ್ಯಂತ ಸುಂದರವಾದ ಅಪ್ಸರೆ ಜನಿಸಿದಳು, ಅವಳ ಹೆಸರು ಊರ್ವಶಿ. ಊರ್ವಶಿಯನ್ನು ಸ್ವರ್ಗದ ಅತ್ಯಂತ ಸುಂದರ ಅಪ್ಸರೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ, ಊರ್ವಶಿ ಬಾಮ್ನಿ ಗ್ರಾಮದ ಬಳಿಯ ಪ್ರದೇಶದಲ್ಲಿ ಸ್ವಲ್ಪ ಸಮಯ ಕಳೆದಳು, ಆದ್ದರಿಂದ ಅವಳನ್ನು ಅಲ್ಲಿ ಮಾ ಊರ್ವಶಿ ದೇವಿ ಎಂದು ಪೂಜಿಸಲಾಗುತ್ತದೆ.
ಬದರಿನಾಥಕ್ಕೆ ಸಂಬಂಧಿಸಿದ ಪುರೋಹಿತರು ಊರ್ವಶಿಯ ಹೇಳಿಕೆಯಿಂದ ಕೋಪಗೊಂಡಿದ್ದಾರೆ. ಸ್ಥಳೀಯ ಭಕ್ತರು ಮಾ ಊರ್ವಶಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ ಎಂದು ಬದರಿನಾಥ ಧಾಮದ ಮಾಜಿ ಅರ್ಚಕ ತಿಳಿಸಿದ್ದಾರೆ. ವಿಶೇಷವಾಗಿ ನವರಾತ್ರಿಯ ಸಂದರ್ಭದಲ್ಲಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ತಾಯಿ ಊರ್ವಶಿ ದೇವಸ್ಥಾನವು ಶಿವನೊಂದಿಗೆ ಸಂಬಂಧ ಹೊಂದಿದೆ. ದೇವಿಯ ದೇವಸ್ಥಾನವನ್ನು ಒಬ್ಬರ ಹೆಸರಿನೊಂದಿಗೆ ಸಂಯೋಜಿಸುವುದು ಸರಿಯಲ್ಲ ಎಂದು ಮಾಜಿ ಅರ್ಚಕರು ಹೇಳಿದರು.