ಪ.ಬಂಗಾಳದ ಯುವತಿ ಗ್ಯಾಂಗ್ ರೇ*ಪ್: ಮೂಲ್ಕಿ ನಿವಾಸಿ ರಿಕ್ಷಾ ಚಾಲಕ ಸಹಿತ ಮೂವರು ಆರೆಸ್ಟ್!


ಮಂಗಳೂರು:
ಗೆಳೆಯನೊಂದಿಗೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣಾ ಪೊಲೀಸರು ಪ್ರಮುಖ ಆರೋಪಿ ಮೂಲ್ಕಿ ನಿವಾಸಿ ರಿಕ್ಷಾ ಚಾಲಕ ಸಮೇತ ಮೂವರನ್ನು ಬಂಧಿಸಿದ್ದಾರೆ.
ಮುಲ್ಕಿ ನಿವಾಸಿ ಆಟೋ ಚಾಲಕ ಪ್ರಭುರಾಜ್ (38), ಕುಂಪಲ ಮೂಲದ ಎಲೆಕ್ಟ್ರಿಷಿಯನ್ ಮಿಥುನ್ (30) ಹಾಗೂ ಮಣಿ(30) ಬಂಧಿತರು. ಯುವತಿ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ನೀಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಕೊಟ್ಟಾರಿಮೂಲೆ ನೇತ್ರಾವತಿ ನದಿ ತೀರ ಸಮೀಪ ನಿನ್ನೆ ತಡರಾತ್ರಿ 1.30 ಸುಮಾರಿಗೆ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಮೂಲದ 20 ಹರೆಯದ ಯುವತಿ 2-3 ವರ್ಷಗಳಿಂದ ಕೇರಳದ ಫೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಗೆಳೆಯನ ಜೊತೆ ಎ.16 ರಂದು ಬೆಳಿಗ್ಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿದ್ದು ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್‌ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಳು. 5-6 ಗಂಟೆಗಳ ಕಾಲ ಆಟೋ ಡ್ರೈವರ್ ಪ್ರಭುರಾಜ್ ಆಕೆಯ ಜೊತೆಗಿದ್ದ ಕಾರಣ ಅವನ ಜೊತೆಗೆ ಗೆಳೆತನ ಆಗಿತ್ತು. ಮೊಬೈಲ್ ರಿಪೇರಿಗೆ ಹಣ ಕೂಡಾ ಆತನೇ ನೀಡಿದ್ದ. ಆಕೆ ರಾತ್ರಿ ಪ.ಬಂಗಾಳಕ್ಕೆ ವಾಪಾಸ್ ಹೋಗಲು ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಹೇಳಿದ್ದಳು. ಆದರೆ ಪ್ರಭುರಾಜ್ ಆಕೆಯನ್ನು ಕರೆದುಕೊಂಡು ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ತನ್ನಿಬ್ಬರು ಗೆಳೆಯರನ್ನು ಕರೆದುಕೊಂಡು ಘಟನೆ ನಡೆದ ಜಾಗಕ್ಕೆ ಹೋಗಿದ್ದ. ಅಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಆಕೆ ಪ್ರಜ್ಞೆ ತಪ್ಪಿದ್ದ ವೇಳೆ ಸರಣಿ ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆಯ ಗಮನಕ್ಕೆ ಬಂದಿದೆ. ಬಳಲಿದ್ದ ಆಕೆ ಸ್ಥಳೀಯ ಮನೆಗೆ ಹೋಗಿ ಕುಸಿದು ಬಿದ್ದಿದ್ದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಮಿಷನರ್ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

error: Content is protected !!