ಉಳ್ಳಾಲ: ಉಳ್ಳಾಲದಲ್ಲಿ ಯುವತಿಯೋರ್ವಳು ತೀರಾ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ಇದೆ. ಯುವತಿ ಮದ್ಯದ ಅಮಲಿನಲ್ಲಿದ್ದು, ತನ್ನ ಮೇಲೆ ಮೂವರಿಂದ ನಾಲ್ಕು ಮಂದಿ ಕೃತ್ಯ ಎಸಗಿದ್ದು, ತನ್ನನ್ನು ರಿಕ್ಷಾದಲ್ಲಿ ತಂದು ಇಲ್ಲಿ ಬಿಡಲಾಗಿದೆ ಎಂದು ಯುವತಿ ಪೊಲೀಸರಲ್ಲಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಈಕೆಯನ್ನು ಸ್ಥಳೀಯರು ರಕ್ಷಿಸಿ ಉಪಚರಿಸಿದ್ದಾರೆ.

ಘಟನೆಯ ವಿವರ: ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಕುಟುಂಬದ ಇಪ್ಪತ್ತು ವರುಷ ಆಸುಪಾಸಿನ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಸ್ಥ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿ ನಿನ್ನೆ ರಾತ್ರಿ ವೇಳೆ ಇದ್ದಳು. ಈಕೆಯನ್ನು ಸ್ಥಳೀಯರು ರಕ್ಷಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ಮದ್ಯದ ಅಮಲಿನಲ್ಲಿದ್ದಳು ಎನ್ನಲಾಗಿದೆ.
ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆ ಈಕೆ ಸ್ಥಳೀಯರೋರ್ವರ ಮನೆಯ ಬಾಗಿಲನ್ನು ತಟ್ಟಿದ್ದು ಕುಡಿಯಲು ನೀರು ಕೇಳಿದ್ದಾಳೆ. ಯುವತಿಯ ಮೈಮೇಲೆ ತರಚಿದ ಗಾಯಗಳಾಗಿದ್ದು, ಗಾಬರಿಗೊಂಡ ಸ್ಥಳೀಯರು ಆಕೆಯನ್ನ ಉಪಚರಿಸಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಮೇಲೆ ಮೂರರಿಂದ ನಾಲ್ಕು ಮಂದಿ ಕೃತ್ಯ ಎಸಗಿದ್ದು, ರಿಕ್ಷಾದಲ್ಲಿ ತಂದು ಇಲ್ಲಿ ಬಿಟ್ಟು ಹೋಗಿದ್ದಾಗಿ ಪೊಲೋಸರಿಗೆ ಮಾಹಿತಿ ನೀಡಿದ್ದಾಳೆ.
ಯುವಕರ ತಂಡವೊಂದು ಯುವತಿಯನ್ನ ರಾಣಿಪುರದ ನೇತ್ರಾವತಿ ನದಿ ತಟದ ಬಳಿ ಕರೆತಂದಿದ್ದು ಆಕೆಯ ಮೇಲೆ ಅತ್ಯಾಚಾರವೆಸಗಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆಗೆ ಪೊಲೀಸರ ತಂಡ ಭೇಟಿ ನೀಡಿದ್ದು, ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.