ಮಂಗಳೂರು/ಹೊಸದಿಲ್ಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಮಹಾಯುದ್ಧದಿಂದಾಗಿ ಮಧ್ಯಪ್ರಾಚ್ಯದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ದುಪ್ಪಟ್ಟುಗೊಳಿಸಿದೆ. ಈ ಬೆಳವಣಿಗೆಯಿಂದಾಗಿ ಈ ಹಿಂದೆ ಚೀನಾಗೆ ತೆರಳಬೇಕಿದ್ದ ರಷ್ಯಾದ ತೈಲ ನೌಕೆಗಳು ಈಗ ಭಾರತದ ಬಂದರುಗಳತ್ತ ಧಾವಿಸುತ್ತಿವೆ.

ಮಾರ್ಚ್ 21ಕ್ಕೆ ಮಂಗಳೂರಿಗೆ ಬರಲಿದೆ ʻಆಕ್ವಾ ಟೈಟಾನ್’
ಹಡಗುಗಳ ಸಂಚಾರದ ದತ್ತಾಂಶಗಳ (Ship-tracking data) ಪ್ರಕಾರ, ʻಆಕ್ವಾ ಟೈಟಾನ್’ (Aqua Titan) ಹೆಸರಿನ ಬೃಹತ್ ತೈಲ ನೌಕೆಯು ಮಾರ್ಚ್ 21ರಂದು ಮಂಗಳೂರಿನ ಎನ್.ಎಂ.ಪಿ.ಟಿ (New Mangalore Port) ತಲುಪಲಿದೆ. ಜನವರಿ ಅಂತ್ಯದಲ್ಲಿ ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ ʻಯುರಲ್ಸ್’ ಕಚ್ಚಾ ತೈಲವನ್ನು ಹೊತ್ತು ಹೊರಟಿದ್ದ ಈ ಹಡಗು, ಮೊದಲು ಚೀನಾದ ರಿಝಾವೊ ಬಂದರಿಗೆ ತೆರಳಬೇಕಿತ್ತು. ಆದರೆ, ಮಾರ್ಚ್ ಮಧ್ಯಭಾಗದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ದಿಢೀರ್ ದಿಕ್ಕು ಬದಲಿಸಿದ ಈ ಹಡಗು ಈಗ ಮಂಗಳೂರಿನತ್ತ ವೇಗವಾಗಿ ಬರುತ್ತಿದೆ.

ಭಾರತಕ್ಕೆ ಅಮೆರಿಕದ ʻಗ್ರೀನ್ ಸಿಗ್ನಲ್’
ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಅಮೆರಿಕವು ಭಾರತಕ್ಕೆ ಹಸಿರು ನಿಶಾನೆ ನೀಡಿದ ಬೆನ್ನಲ್ಲೇ ಈ ಬದಲಾವಣೆಗಳು ನಡೆದಿವೆ. ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದ ಸರಬರಾಜು ಕಡಿತಗೊಂಡಿರುವುದರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಭಾರತೀಯ ಸಂಸ್ಕರಣಾಗಾರಗಳು ಒಂದೇ ವಾರದಲ್ಲಿ ರಷ್ಯಾದಿಂದ ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಿವೆ.

ದಿಕ್ಕು ಬದಲಿಸಿದ 7 ತೈಲ ನೌಕೆಗಳು
ಕೇವಲ ಆಕ್ವಾ ಟೈಟಾನ್ ಮಾತ್ರವಲ್ಲದೆ, ಚೀನಾಗೆ ತೆರಳಬೇಕಿದ್ದ ಕನಿಷ್ಠ ಏಳು ರಷ್ಯಾದ ತೈಲ ಟ್ಯಾಂಕರ್‌ಗಳು ಅರ್ಧ ದಾರಿಯಲ್ಲೇ ತಮ್ಮ ಗುರಿಯನ್ನು ಭಾರತದತ್ತ ಬದಲಿಸಿಕೊಂಡಿವೆ ಎಂದು ‘ವೋರ್ಟೆಕ್ಸಾ’ ಸಂಸ್ಥೆ ತಿಳಿಸಿದೆ. ಇದಲ್ಲದೆ, ಕಝಾಕಿಸ್ತಾನ್‌ನ ತೈಲ ಹೊತ್ತ ‘ಝೌಝೌ ಎನ್’ (Zouzou N.) ಎಂಬ ಹಡಗು ಕೂಡ ಚೀನಾದತ್ತ ಹೋಗುವುದನ್ನು ನಿಲ್ಲಿಸಿ, ಮಾರ್ಚ್ 25ಕ್ಕೆ ಗುಜರಾತ್‌ನ ಸಿಕ್ಕಾ ಬಂದರು ತಲುಪಲಿದೆ.

ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ
ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳೂ ರಷ್ಯಾದಿಂದ ತೈಲ ಖರೀದಿಸಲು ಮತ್ತೆ ಮುಂದಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಭಾರತವು ಸಮಯಪ್ರಜ್ಞೆ ಮೆರೆದು ಮುಂಚಿತವಾಗಿಯೇ ಹೆಚ್ಚಿನ ಪ್ರಮಾಣದ ತೈಲವನ್ನು ರಷ್ಯಾದಿಂದ ಪಡೆಯುತ್ತಿರುವುದು ದೇಶದ ಆರ್ಥಿಕತೆಗೆ ತುಸು ನಿರಾಳತೆ ನೀಡಿದೆ.