ಬೆಂಗಳೂರು: ಮಚ್ಚು, ಲಾಂಗು ಹಿಡಿದು ರೀಲ್ಸ್ ಮಾಡಿ, ಧಿಮಾಕು ತೋರಿಸಿ ಜೈಲಿಗೆ ಹೋಗಿ ಬಂದಿದ್ದ ನಟ ರಜತ್ ಅಲಿಯಾಸ್ ಬುಜ್ಜಿಯನ್ನು ಖಾಕಿ ಪಡೆ ಮತ್ತೆ ಬಂಧಿಸಿದೆ. ಈತ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಈತನ ಜೊತೆ ಪೋಸ್ ನೀಡಿದ್ದ ವಿನಯ್ ನಿನ್ನೆಯೇ ಪೊಲೀಸ್ ಸ್ಟೇಷನ್‌ಗೆ ಹೋಗಿ ಸಹಿ ಹಾಕಿಕೊಂಡು ಬಂದಿದ್ದರಿಂದ ಬಚಾವಾಗಿದ್ದಾನೆ. ಆದರೆ ಪೊಲೀಸರು ಯಾವುದೋ ಕಾರಣವನ್ನಿಟ್ಟುಕೊಂಡು ವಿನಯ್ ಬಂಧನಕ್ಕೆ ತೆರಳಿದ್ದು, ಅಷ್ಟರಲ್ಲಿ ಆತ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಹಾಡಹಗಲೇ ಕೊಚ್ಚಿ ಕೊಲೆ ಮಾಡುವವರು ಇಡೀ ಊರಲ್ಲಿ ಬಿಂದಾಸ್ ಆಗಿ ಸುತ್ತಾಡುತ್ತಿರುವಾಗ ಯಕಶ್ಚಿತ್ ರೀಲ್ಸ್ ಮಾಡಿದ್ದಕ್ಕೆ ಪೊಲೀಸರು ಇವರಿಬ್ಬರಿಗೆ ಕೊಡುವ ಟ್ರೀಟ್‌ಮೆಂಟ್ ನೋಡಿ ಯುವಕರು ಬೆಚ್ಚಿಬಿದ್ದಿದ್ದಾರೆ. ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿದ್ದ ಕೊಲೆ ಆರೋಪಿ ದರ್ಶನ್‌ನ ಅಭಿಮಾನಿಗಳಾದ ರಜತ್ ಹಾಗೂ ವಿನಯ್ ರಿಯಲ್ ಮಚ್ಚು, ಲಾಂಗು ಹಿಡಿದು ರೀಲ್ಸ್ ಮಾಡಿ ಇದೀಗ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆಯ ಹಿನ್ನೆಯಲ್ಲಿ ರಜತ್‌ಗೆ ಪೊಲೀಸರು ಬಂಧನದ ರುಚಿ ತೋರಿಸಿದ್ದಾರೆ. ರಜತ್‌ನನ್ನು ಪೊಲೀಸರು ಇಂದು 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಸದ್ಯ ಪೊಲೀಸರಿಂದ ಬಂಧನ ಭೀತಿ ಶುರುವಾಗುತ್ತಿದ್ದಂತೆ ವಿನಯ್ ಗೌಡ, ನಾನು ಸಿನಿಮಾ ಚಿತ್ರೀಕರಣದಲ್ಲಿದ್ದೇನೆ, ನಿನ್ನೆ ನಾನು ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ದೇನೆ, ವಾರೆಂಟ್ ಜಾರಿಯಾಗಿರೋದು ನನಗೆ ಗೊತ್ತಿಲ್ಲ. ಸದ್ಯ ನಾನು ಮನೆಯಲ್ಲಿಲ್ಲ, ನನಗೆ ಯಾವುದೇ ಕರೆಯೂ ಬಂದಿಲ್ಲ ಎಂದು ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ಆದರೆ ಈತನೂ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ.
ವಿವಾದದ ಕೇಂದ್ರಬಿಂದುವಾಗಿದ್ದ ಆ ವಿಡಿಯೋ ಇನ್ನೂ ಇನ್ಸ್ಟಾಗ್ರಾಂನಲ್ಲಿ ಓಡುತ್ತಾ ಇದ್ದು, ರಜತ್ ಅದನ್ನು ಡಿಲೀಟ್ ಮಾಡದೆ ಬೇಜವಾಬ್ದಾರಿತನ ತೋರಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಡಿಲೀಟ್ ಆಗಿದೆ. ವಿವಾದಾತ್ಮಕ ವಿಡಿಯೋ ಡಿಲೀಟ್ ಆಗಿಲ್ಲ ಎಂದು ನೆಟ್ಟಿಗರ ಕಮೆಂಟ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಬುಜ್ಜಿಗೆ ಎಚ್ಚರಿಕೆ ನೀಡಿದ್ದು, ಇದರಿಂದ ಹೆದರಿ ಕಂಗಾಲಾದ ಬುಜ್ಜಿ ವಿಜಿಯೋವನ್ನು ಡಿಲೀಟ್ ಮಾಡಿದ್ದ. ಇದರ ಬೆನ್ನಲ್ಲೇ ಪೊಲೀಸರು ಬುಜ್ಜಿಯನ್ನು ಬಂಧಿಸಿದ್ದಾರೆ.
ಸ್ವಘೋಷಿತ ಡಿ ಬಾಸ್, ಕೊಲೆ ಆರೋಪಿ, ನಟ ದರ್ಶನ್‌ನನ್ನು ಮೆಚ್ಚಿಸಲೆಂದು ಬಿಗ್‌ಬಾಸ್ ರಜತ್ ಹಾಗೂ ಬಿಗ್‌ಬಾಸ್ ವಿನಯ್ ಆತನ ಚಿತ್ರಗಳನ್ನು ಪ್ಯಾಂಟ್, ಶರ್ಟ್‌ನಲ್ಲಿ ಬರೆಸಿ ಮಚ್ಚು ಲಾಂಗು ಹಿಡಿದು, ಪೋಸ್ ಕೊಟ್ಟು, ಅದರ ವಿಡಿಯೋ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಬಸವೇಶ್ವರ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ರಜತ್ ಸೇರಿದಂತೆ ಆರೋಪಿಗಳನ್ನು ಜೈಲಿಗಟ್ಟಿದ್ದರು. ಸುಮಾರು ದಿನಗಳ ಕಾಲ ಜೈಲಿನಲ್ಲೇ ಇದ್ದು, ಪೆಚ್ಚಾಗಿದ್ದ ಈ ಇಬ್ಬರು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಆದರೆ ಇಷ್ಟಾದರೂ ವಿವಾದ ಸೃಷ್ಟಿಸಿದ್ದ ವಿಡಿಯೋ ಡಿಲೀಟ್ ಮಾಡದೆ ಪೊಲೀಸರಿಗೆ ಎಚ್ಚರಿಕೆಯ ಬಳಿಕೆ ಡಿಲೀಡ್ ಮಾಡಿದ್ದರು. ಇದೀಗ ಮತ್ತೆ ಬಂಧನಕ್ಕೀಡಾಗಿದ್ದು, ರೀಲ್ಸ್ ಪ್ರಕರಣ ಇವರಿಬ್ಬರನ್ನು ರೀಲಿನಂತೆ ಸುತ್ತಿಕೊಳ್ಳಲಾರಂಭಿಸಿದೆ.