ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಈ ಬೆಳವಣಿಗೆ ಹಿಂದೆ ಬಾಂಗ್ಲಾದೇಶ ಮೂಲದ ದುಷ್ಕರ್ಮಿಗಳ ಕೈವಾಡ ಇರಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ನಾಯಕರಿಂದ ಬೆಂಬಲ ಹೊಂದಿರುವ ದುಷ್ಕರ್ಮಿಗಳು ಹಿಂಸಾಚಾರ ಆರಂಭಿಸಿದ್ದು, ನಂತರ ಅವರು ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಸರಣಿ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ 3 ಗಡಿ ಪ್ರದೇಶಗಳಿಗೆ ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ನಿಯೋಜಿಸಿದೆ. ಈ ನಡುವೆ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾದ ಬಗ್ಗೆ, ರೈಲ್ವೆ ಮೂಲಸೌಕರ್ಯದ ಮೇಲಿನ ದಾಳಿಯ ವರದಿ ಮತ್ತು ಅಶಾಂತಿಯ ಆರಂಭಿಕ ಹಂತದಲ್ಲಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರಣೆಯನ್ನು ಕೇಳಿದೆ.