ಕಾಸರಗೋಡು: ಮಧೂರು ದೇವಸ್ಥಾನಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಕಡಿತಗೊಂಡ ಸಮಯವನ್ನು ದುರುಪಯೋಗಪಡಿಸಿಕೊಂಡ ದುರುಳರು 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ರಾಜೇಶ್ (35), ರಾಮನ್ ಕೊಲ್ಲಿಯ (71), ರಾಮನ್ ಕೋಡಿಮಥನನ್ ಮತ್ತು ಚಿದಂಬರಂ ಎಂದು ಗುರುತಿಸಲಾಗಿದೆ. ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು 14 ವರ್ಷದ ಬಾಲಕನ ಮೇಲೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಧೂರು ಗ್ರಾಮ ಪಂಚಾಯತ್‌ನಲ್ಲಿ ದೇವಾಲಯ ಉತ್ಸವದ ನಂತರ ಈ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವಾಲಯದ ಮೈದಾನಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ, ಬಾಲಕನೋರ್ವ ನಿರ್ಜನ ಪ್ರದೇಶದಲ್ಲಿ ಬಾಲಕ ಒಬ್ಬಂಟಿಯಾಗಿ ನಿಂತಿದ್ದನ್ನು ದಾರಿಹೋಕರು ಗಮನಿಸಿದರು. ವಿಚಾರಣೆ ಮಾಡಿದಾಗ, 71 ವರ್ಷದ ವ್ಯಕ್ತಿಯೊಬ್ಬರು ದೇವಾಲಯದ ಮೈದಾನದಿಂದ ತನ್ನನ್ನು ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಬಾಲಕ ಜನರಿಗೆ ತಿಳಿಸಿದ್ದನು. ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಆಪ್ತ ಸಮಾಲೋಚನೆಯ ಸಮಯದಲ್ಲಿ, ಬಾಲಕನು ತನ್ನ ಮೇಲೆ ನಡೆಯುತ್ತಿರುವ ದೀರ್ಘಕಾಲದ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಗುಂಪು ತನ್ನ ಮೇಲೆ ದೌರ್ಜನ್ಯ ನಡೆಸುತ್ತಿತ್ತು ಎಂದು ಬಾಲಕ ತಿಳಿಸಿದ್ದಾನೆ.
ಬಾಲಕನ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 5 (ಎಲ್) ಮತ್ತು (ಎಂ) ಅಡಿಯಲ್ಲಿ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿ ಹೇಳಿದರು.