ವೃದ್ಧೆಯ ಚಿನ್ನದ ಸರ ಕಳವು ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ವೃದ್ಧೆಯ ಚಿನ್ನದ ಸರ ಕಳವು ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ಕೋಟ : ಮನೆ ಮಂದಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಾಗಿಲು ಮುರಿದು ಮನೆಗೆ ನುಗ್ಗಿ ವೃದ್ಧೆಯ ಚಿನ್ನ ಕಳವು ಮಾಡಿದ ಪ್ರಕರಣದ ಆರೋಪಿ‌ ಕೋಟ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಕ್ರಿಮಿನಲ್‌ ಹಿನ್ನೆಲೆಯ ಆಧಾರದಲ್ಲಿ ಹಿಡಿದು ಬಾಯ್ಬಿಡಿಸಿದಾಗ ಈತ ಮಾಡಿದ ಕೃತ್ಯ ಬಟಾಬಯಲಾಗಿದೆ.

ಕುಂದಾಪುರದ ಮಣೂರು ನಿವಾಸಿ ಪ್ರವೀಣ್‌ ಕುಮಾರ್‌ ಶೆಟ್ಟಿ (38) ಬಂಧಿತ ಆರೋಪಿ. ಈತನಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ.

 

ಮಾರ್ಚ್‌ 20 ರಂದು ರಾತ್ರಿ ಮಣೂರು ಕೊಯ್ಯೂರು ಎಂಬಲ್ಲಿ ಧಾರವಾಡದಲ್ಲಿ ಉದ್ಯಮಿಯಾಗಿರುವ ಶ್ರೀಧರ್‌ ಅವರು ಕುಟುಂಬದವರ ಜತೆ ಸಮೀಪದ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ 92 ವರ್ಷ ಪ್ರಾಯದ ವೃದ್ಧೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇದೇ ಸಮಯದಲ್ಲಿ ಮನೆಗೆ ನುಗ್ಗಿದ ಆರೋಪಿ ಚಿನ್ನದ ಸರವನ್ನು ಕಳವು ಮಾಡಿದ್ದಾಗಿ ಕೋಟ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರಿಗೆ ಕ್ರಿಮಿನಲ್‌ ಹಿನ್ನೆಲೆ ಇರುವ ಪ್ರವೀಣ್‌ ಕುಮಾರ್‌ ಶೆಟ್ಟಿ ಜಾತ್ರೆಗೆ ತೆರಳಿರುವ ವಿಷಯ ಗೊತ್ತಾಗಿತ್ತು. ಆತನನ್ನು ಕರೆಸಿ ವಿಚಾರಣೆ ನಡೆಸಿ ಮೊಬೈಲ್‌ ನೆಟ್‌ ವರ್ಕ್‌ ಮತ್ತಿತರ ಸಾಕ್ಷ್ಯಗಳ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಆತನೇ ಕಳವು ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಪ್ರವೀಣ್‌ 10 ವರ್ಷಗಳ ಹಿಂದೆ ಹೈದರಾಬಾದ್‌ ನಲ್ಲಿ ವಾಸವಾಗಿದ್ದು, ಅಲ್ಲಿಯೂ ಆತನ ಮೇಲೆ ಅನೇಕ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಆತ ತನ್ನ ಹುಟ್ಟಿದ ಊರು ಮಣೂರಿಗೆ ವಾಪಾಸಾಗಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೋಟ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್‌ಗಳಾದ ರಾಘವೇಂದ್ರ ಸಿ ಮತ್ತು ಸುಧಾ ಪ್ರಭು, ಜಯಪ್ರಕಾಶ್, ಎ.ಎಸ್.ಐ. ಮತ್ತು ಹೆಡ್ ಕಾನ್ಸ್ ಟೆಬಲ್ ರೇವತಿ, ಕೃಷ್ಣ, ಶ್ರೀಧರ್ ಹಾಗೂ ಕಾನ್ಸ್‌ ಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ಅವರ ತಂಡ ಈ ಕಾರ್ಯಾಚರಣೆ ನಡೆಸಿತು.

error: Content is protected !!