ಹಕ್ಕಿ ಜ್ವರದ ಭೀತಿ ನಿವಾರಣೆಯಾಗುತ್ತಿದ್ದಂತೆ ವಕ್ಕರಿಸಿದ ಬೆಕ್ಕು ಜ್ವರ: ನೂರಾರು ಬೆಕ್ಕುಗಳು ನಿಗೂಢ ಸಾವು

ರಾಯಚೂರು: ಹಕ್ಕಿ ಜ್ವರದ ಆತಂಕ ನಿವಾರಣೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬೆಕ್ಕುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಫಿಲೈನ್ ಪ್ಯಾನ್ ಲೀಕೊಪೇನಿಯಾ (ಎಫ್‌ಪಿವಿ) ಸೋಂಕಿನ ಆರ್ಭಟ ಜೋರಾಗಿದೆ. ರಾಯಚೂರು ನಗರ ಸೇರಿ ಜಿಲ್ಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೆಕ್ಕುಗಳು ಎಫ್‌ಪಿವಿ ಸೋಂಕಿನಿಂದ ಬಳಲುತ್ತಿವೆ. ಕಳೆದ ಮಾ.1ರಿಂದ ಇಲ್ಲಿ ತನಕ ಸ್ಥಳೀಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್‌ ಹೊರರೋಗಿಗಳ ವಿಭಾಗಕ್ಕೆ ಆಗಮಿಸಿದ 62 ಬೆಕ್ಕುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಈ ಸೋಂಕಿನಿಂದಾಗಿ 38 ಬೆಕ್ಕುಗಳು ಸಾವನಪ್ಪಿರುವುದರ ಕುರಿತು ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
.
ಬೆಕ್ಕುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಎಫ್ ಪಿವಿ ಸೋಂಕು ಅವುಗಳಲ್ಲಿ ತೀವ್ರ ಬಾಧೆಯನ್ನುಂಟು ಮಾಡುತ್ತವೆ. ಸೋಂಕು ಕಾಣಿಸಿಕೊಂಡ ಬೆಕ್ಕುಗಳು ಜ್ವರದಿಂದ ನಿಶಕ್ತಿಗೊಳ್ಳುತ್ತವೆ. ಬೆಕ್ಕುಗಳಲ್ಲಿ ಎಫ್‌ಪಿವಿ ರೋಗದ ಮುಂಜಾಗ್ರತೆ ಲಸಿಕೆ ಹಾಕಿಸದೇ ಇರುವುದರಿಂದ ರೋಗೋದ್ರೇಕ ಕಂಡು ಬರಲಿದ್ದು, ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣಕ್ಕೆ ಬೆಕ್ಕುಗಳು ಸಾವನಪ್ಪುತ್ತವೆ.

ಸಹಜವಾಗಿ ಈ ಭಾಗದಲ್ಲಿ ಬೆಕ್ಕುಗಳನ್ನು ಸಾಕುವವರ ಸಂಖ್ಯೆಯೂ ಜಾಸ್ತಿಯಿಲ್ಲ. ಆದರೆ ಜಿಲ್ಲೆನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿಯಲ್ಲಿಯೇ ಬೆಕ್ಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವುದೇ ಸವಾಲಿನ ಕೆಲಸವಾಗಿದೆ. ಈ ಸೋಂಕು ಬೇರೆ ಪ್ರಾಣಿ ಹಾಗೂ ಮನುಷ್ಯರಿಗೆ ಹರಡುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ಹಾಗೂ ಸಾಕು ಪ್ರಾಣಿ ಮಾಲೀಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!