ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ರಜತ್ ಕಿಶನ್ ಹಾಗೂ ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿ ವಿನಯ್ ಗೌಡ ನಿನ್ನೆ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದಾರೆ. ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರು ಸೆಲೆಬ್ರೆಟಿಗಳನ್ನು ಬಂಧಿಸಿದ್ದು, ಮಾರ್ಚ್ 24ರ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿನಯ್ ಗೌಡ ಹಾಗೂ ರಜತ್ ಕಿಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ರೀಲ್ಸ್ ಮಾಡುವಾಗ ಮಾಡಿದ ಸಣ್ಣ ತಪ್ಪಿನಿಂದ ಇಬ್ಬರ ಮೇಲೆ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿದ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದರು.