ಮಂಗಳೂರು: ಈ ಬಾರಿ ತುಳುನಾಡಿನಲ್ಲಿ ಗರಿಷ್ಠ ಮಟ್ಟದಲ್ಲಿ ಉಷ್ಣತೆ ಇದ್ದು, ಇದು ಮೀನುಗಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಿಸಿಲಿನ ಧಗೆಯಿಂದ ಬೋಟ್‌ಗಳು ಸಮುದ್ರಕ್ಕಿಳಿಯದ ಸ್ಥಿತಿ ನಿರ್ಮಾಣವಾಗಿದ್ದು, ದಡದಲ್ಲಿಯೇ ಲಂಗರು ಹಾಕಿದೆ. ಬೇಸಿಗೆ ಕಾಲ ಮೀನಿನ ಸುಗ್ಗಿಯ ಕಾಲವಾಗಿದ್ದರೂ, ಬಿಸಿಲಿನಿಂದ ಮೀನು ಹಿಡಿಯಲಾಗದ ಕಾರಣ ಅದರ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.
ಕೇವಲ ನೂರು ರೂಪಾಯಿಗೆ ಬಿಕರಿಯಾಗುತ್ತಿದ್ದ ಒಂದು ಕೆಜಿ ಬಂಗುಡೆಯ ದರ ಬರೋಬ್ಬರಿ 300 ರೂ. ತಲುಪಿದೆ. ತರು(ಸಣ್ಣ) ಬೂತಾಯಿಗೆ 300ರಿಂದ 350, ಮುರು ಮೀನು ಕೆಜಿಗೆ 340, ಅಡೆ ಮೀನು ಕೆಜಿಗೆ 280, 150ಕ್ಕೆ ಬಿಕರಿಯಾಗುತ್ತಿದ್ದ ಏಡಿಗೆ 400, ಸಿಗಡಿ ಕೆಜಿಯೊಂದಕ್ಕೆ 800ರವರೆಗೆ ಏರಿಕೆಯಾಗಿದೆ. ಅಂಜಲ್, ಕಾಣೆ, ಕಡುವೈ, ಮದಿಮಾಲ್ ಮೀನು ಬಹುತೇಕ ಅಪರೂಪವಾಗಿದ್ದು, ಇದರ ದರ ಭಾರೀ ಏರಿಕೆಯಾಗಿದೆ.
ಹೀಟ್‌ಸ್ಟ್ರೋಕ್‌ನಿಂದಾಗಿ ಬಹುತೇಕ ಮೀನುಗಾರಿಕೆ ಸ್ತಬ್ಧವಾಗುವ ಪರಿಸ್ಥಿತಿ ತಲುಪಿದ್ದು, ಶೇ.80ರಷ್ಟು ಬೋಟ್‌ಗಳು ದಡದಲ್ಲೇ ಲಂಗರು ಹಾಕಿವೆ. ಹಾಗಾಗಿ ಕಡಲ ನಗರಿಗೂ ಹೊರ ರಾಜ್ಯಗಳನಿಂದ ಮೀನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಉದ್ಭವಿಸಿದೆ.
ಆಗಸ್ಟ್ ಬಳಿಕ ಆರಂಭವಾಗುವ ಮೀನುಗಾರಿಕೆ ಡಿಸೆಂಬರ್-ಜನವರಿಯಲ್ಲಿ ಸ್ವಲ್ಪ ಕಡಿಮೆ ಆಗುತ್ತದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಎರಡನೇ ಹಂತ ಆರಂಭವಾಗುತ್ತದೆ. ಆಗ ಮತ್ಸೋದ್ಯಮಿಗಳಿಗೆ ಸುಗ್ಗಿಯ ಕಾಲ. ಆದರೆ, ಈ ವರ್ಷ ತಾಪಮಾನದ ಏರಿಕೆಯಿಂದ ಎರಡನೇ ಅವಧಿಯ ಎರಡು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ. ಬಿಸಿಲಿನ ಝಳಕ್ಕೆ ಮೀನುಗಳು ತುಳುನಾಡಿನ ಸಮುದ್ರದಿಂದ ಓಡಿ ಹೋಗಿವೆ.
ಅಲ್ಲದೆ ಬಿಸಿ ತಾಳಲಾರದೆ ಮೀನುಗಳು ಸಮುದ್ರದೊಳಗಿನ ಬಂಡೆಗಳ ಮರೆಗೆ ಸರಿಯುತ್ತಿವೆ. ಮೀನು ಫ್ರೆಷ್ ಆಗಿ ಉಳಿಯಲು ತೆಗೆದುಕೊಂಡು ಹೋಗುವ ಐಸ್ ಕೂಡಾ ಕರಗುತ್ತಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಟ್ರಾಲ್ ಬೋಟ್‌ಗಳಲ್ಲಿ ಸುಮಾರು 500 ಬ್ಲಾಕ್ ಐಸ್ ಕೊಂಡೊಯ್ದರೆ ಸುಮಾರು 12 ದಿನಗಳಿಗೆ ಸಾಕಾಗುತ್ತಿತ್ತು. ಆದರೆ, ಇತ್ತೀಚೆಗೆ ಎಂಟು ದಿನಗಳಲ್ಲೇ ಕರಗುತ್ತಿದೆ. ಇದರಿಂದ ನಿಗದಿತ ಅವಧಿಗಿಂತ ಮೊದಲೇ ದಡಕ್ಕೆ ವಾಪಸು ಬರುವುದರಿಂದ ಮೀನು ಹಿಡಿಯಲು ಅಸಾಧ್ಯವಾಗುತ್ತಿದೆ.