ಔರಂಗ ಜೇಬ್‌ ಸಮಾಧಿ ವಿವಾದ: ಗಲಭೆಯ ರೂವಾರಿ ಸೆರೆ

ಔರಂಗ ಜೇಬ್‌ ಸಮಾಧಿ ವಿವಾದ: ಗಲಭೆಯ ರೂವಾರಿ ಸೆರೆ

ನಾಗ್ಪುರ: ಮೊಘಲ್‌ ದೊರೆ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಬಜರಂಗದಳ, ವಿಶ್ವಹಿಂದೂ ಪರಿಷತ್‌ ನಡೆಸಿದ ಬಳಿಕ ನಡೆದ ಗಲಭೆಯ ರೂವಾರಿ ಫಹೀಮ್ ಖಾನ್ (38) ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ನ ಎಂಟು ಮಂದಿ ಸೇರಿದಂತೆ ಒಟ್ಟು 78 ಮಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ನಾಗ್ಪುರ ನಗರದ ಬಹುತೇಕ ಕಡೆಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.


ಈ ಗಲಭೆಯ ರೂವಾರಿ ಫಹೀಮ್ ಖಾನ್ ನಾಗ್ಪುರದ ತನ್ನ ಮನೆಯಲ್ಲಿ ಅವಿತುಕೊಂಡಿದ್ದ. ಮಾಹಿತಿ ಪಡೆದ ಪೊಲೀಸರು ದಿಢೀರ್‌ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಸೈಕಲ್ ರಿಪೇರಿ ಶಾಪ್ ಮಾಲೀಕ ಹಾಗೂ ಬುರ್ಖಾ ಮಾರಾಟಗಾರನಾಗಿರುವ ಫಹೀಮ್ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿ 1000 ಮತಗಳನ್ನು ಪಡೆದಿದ್ದ. ಹಿಂದೂ ಸಂಘಟನೆಗಳು ಔರಂಗಜೇಬ್‌ ಸಮಾಧಿ ತೆರವುಗೊಳಿಸಲು ಪ್ರತಿಭಟನೆ ನಡೆಸಿರುವುದರಿಂದ ಕ್ರುದ್ಧನಾದ ಈತ ಜನರನ್ನು ಎತ್ತಿಕಟ್ಟಿ ಗಲಭೆ ನಡೆಸಲು ದುಷ್ಪ್ರೇರಣೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಘಲ್ ದೊರೆಯ ಸಮಾಧಿ ತೆರವಿಗೆ ಆಗ್ರಹಿಸಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಔರಂಗಜೇಬನ ಪ್ರತಿಕೃತಿ ಮತ್ತು ಧಾರ್ಮಿಕ ಚಾದರ್ ದಹಿಸಿದ ಬಜರಂಗದಳ ಮತ್ತು ವಿಎಚ್ಪಿ ಸದಸ್ಯರ ವಿರುದ್ಧ ದೂರು ನೀಡಲು ಈತನ ನೇತೃತ್ವದ ಗುಂಪು ಗಣೇಶಪೇಟೆ ಪೊಲೀಸ್ ಠಾಣೆಗೆ ತೆರಳಿತ್ತು. ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆಪಾದಿಸುವ ಹಾಗೂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಟೀಕಿಸುವ ವಿಡಿಯೊವನ್ನು ಠಾಣೆಯಿಂದ ಹೊರಬಂದ ತಕ್ಷಣ ಫಹೀಮ್ ಚಿತ್ರೀಕರಿಸಿದ್ದ. ಎರಡೂ ವಿಡಿಯೊಗಳು ವೈರಲ್ ಆಗಿದ್ದು, ಇದು ಆರೆಸ್ಸೆಸ್ ಪ್ರಧಾನ ಕಚೇರಿ ಇರುವ ಪ್ರದೇಶದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಅಂದರೆ ನಾಗ್ಪುರದ ಮಹಲ್ ಪ್ರದೇಶದಲ್ಲಿ ಗಲಭೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈತನ ಬಂಧನ ನಡೆದಿದೆ.

error: Content is protected !!