ಇನ್ನು ನಿಜವಾಗುತ್ತದೆ ಹವಾಮಾನ ವರದಿ! ಶಕ್ತಿನಗರದಲ್ಲಿ ಅತ್ಯಾಧುನಿಕ ಡಾಪ್ಲರ್‌ ರಡಾರ್‌ ಅಳವಡಿಕೆ

ನವದೆಹಲಿ: ಮಂಗಳೂರಿನಲ್ಲಿ ಅಳವಡಿಸಲಾಗಿರುವ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಡಾಪ್ಲರ್‌ ರಡಾರ್‌ ಅನ್ನು ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ಉದ್ಘಾಟಿಸಿದ್ದಾರೆ. ಇದೇ ಸಂದರ್ಭ ಛತ್ತೀಸಗಢದ ರಾಯ್ಪುರದಲ್ಲಿಯೂ ಡಾಪ್ಲರ್‌ ರಡಾರ್‌ ಲೋಕಾರ್ಪಣೆಗೊಂಡಿತು. ಹೀಗಾಗಿ ಇನ್ನು ಮುಂದೆ ಹವಾಮಾನ ವರದಿ ನಿಖರವಾಗಿರಲಿದೆ.

ಭಾರತದ ಹವಾಮಾನ ಮುನ್ಸೂಚನೆ ಸಾಮರ್ಥ್ಯವನ್ನು ವೃದ್ಧಿಸುವ ಮಿಷನ್‌ ಮೌಸಮ್‌ ಅಡಿಯಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗಿದೆ. ವಿಶೇಷವೆಂದರೆ ಇದು ರಾಜ್ಯದಲ್ಲಿ ಅಳವಡಿಸಲಾಗಿರುವ ಮೊದಲ ಡಾಪ್ಲರ್‌ ರಡಾರ್‌ ಆಗಿದೆ. ಮಂಗಳೂರಿನ ಶಕ್ತಿನಗರದಲ್ಲಿ ಭಾರತೀಯ ಭಾರತ ಹವಾಮಾನ ಇಲಾಖೆಯ ಕಚೇರಿಯಲ್ಲಿ ಈ ರಡಾರ್‌ ಅಳವಡಿಸಲಾಗಿದ್ದು, ಇನ್ನು ನಿಖರ ಹವಾಮಾನ ವರದಿ ನೀಡಲಿದೆ.

ಉಪಯೋಗಗಳು:
ಡಾಪ್ಲರ್‌ ಎಫೆಕ್ಟ್‌(ಬೆಳಕು ಅಥವಾ ಶಬ್ದದಂತಹ ತರಂಗದದಲ್ಲಿನ ಬದಲಾವಣೆ) ಬಳಸಿಕೊಂಡು ಈ ರಾಡಾರ್‌, ಮಳೆಯನ್ನು ಪತ್ತೆಹಚ್ಚುವುದು, ಗಾಳಿಯ ವೇಗ ಮತ್ತು ದಿಕ್ಕಿನ ಆಧಾರದಲ್ಲಿ ಅದರ ಚಲನೆಯನ್ನು ಅಳೆಯುವುದು ಸೇರಿದಂತೆ ಹವಾಮಾನ ಮುನ್ಸೂಚನೆಗೆ ಅಗತ್ಯವಾದ ಕೆಲಸಗಳನ್ನು ಮಾಡುತ್ತದೆ.

ತರಂಗಗಳನ್ನು ಅಡ್ಡ ಮತ್ತು ಲಂಬ ದಿಕ್ಕಿನಲ್ಲಿ ರವಾನಿಸುವ ಈ ಸಿ-ಬ್ಯಾಂಡ್‌ ರಡಾರ್‌ 250 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಕರ್ನಾಟಕ, ಕೇರಳ, ಗೋವಾ, ದಕ್ಷಿಣ ಕೊಂಕಣ, ಉತ್ತರ ಲಕ್ಷದ್ವೀಪ ಮತ್ತು ದಕ್ಷಿಣ ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆ, ಮಿಂಚು, ಆಲಿಕಲ್ಲು ಮಳೆ, ಬಿರುಗಾಳಿ, ಪ್ರಕ್ಷುಬ್ಧತೆ ಮತ್ತು ಇತರ ತೀವ್ರ ಹವಾಮಾನದ ಮುನ್ಸೂಚನೆ ನೀಡಲಿದೆ. ಆಲಿಕಲ್ಲು ಮಳೆಯನ್ನೂ ಇದು ಪತ್ತೆ ಮಾಡಬಲ್ಲದು.

ಇಷ್ಟರ ತನ ಹವಾಮಾನ ಇಲಾಖೆ ನೀಡುತ್ತಿರುವ ಹವಾಮಾನ ವರದಿಗಳು ನಿಖರವಾಗುತ್ತಿರಲಿಲ್ಲ. ಮಳೆ ಅಂದ್ರೆ ಬಿಸಿಲು, ಮಳೆಯೇ ಇಲ್ಲ, ಒಣ ಹವೆ ಮುಂದುವರಿಯಲಿದೆ ಎಂದಾಗ ಇಡೀ ಊರಿಗೆ ಊರೇ ಕೊಚ್ಚಿಕೊಂಡು ಹೋಗುತ್ತಿತ್ತು. ಇನ್ನು ಇದಕ್ಕೆ ಇತಿಶ್ರೀ ಬೀಳುವ ನಿರೀಕ್ಷೆ ಇದೆ.

error: Content is protected !!