ವಿಟ್ಲ-ಕನ್ಯಾನದ ಜನರಿಗೆ “ಪ್ರೇತ ಬಾಧೆ”!

ಮಂಗಳೂರು: ವಿಟ್ಲ ಕನ್ಯಾನ ಪರಿಸರದಲ್ಲಿ ಬಿಳಿ ಸೀರೆ ಉಟ್ಟಿರುವ ಮಹಿಳೆ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುತ್ತಿರುವ ಅರೆಕ್ಷಣದಲ್ಲೇ ಮಾಯವಾಗುತ್ತಿರುವ ಸುದ್ದಿಗಳು ಕಿವಿಗೊಂದು ತಲೆಗೊಂದು ಎಂಬಂತೆ ಓಡಾಡುತ್ತಿದ್ದು ಜನರು ಪ್ರೇತ ಬಾಧೆಯಿಂದ ಕಂಗಾಲಾಗಿದ್ದಾರೆ.
ಕೆಲದಿನಗಳ ಹಿಂದೆ ಕುಡ್ತಮುಗೇರು ಕಡೆಗೆ ಬೈಕಲ್ಲಿ ಬರುತ್ತಿದ್ದ ಯುವಕನಿಗೆ ನೆಕ್ರಾಜೆ ತಂಗುದಾಣದ ಬಳಿ ಬಿಳಿಸೀರೆಯಲ್ಲಿ ಮಹಿಳೆ ನಿಂತಿರುವುದು ಕಂಡುಬಂದಿದೆ. ಕೈ ಸನ್ನೆ ಮಾಡಿ ಬೈಕ್ ನಿಲ್ಲಿಸಲು ಹೇಳಿದ್ದು ಈ ವೇಳೆ ಆತ ಬೈಕ್ ನಿಲ್ಲಿಸಿರಲಿಲ್ಲ. ಅಷ್ಟರಲ್ಲೇ ಮಹಿಳೆ ಮಾಯವಾಗಿದ್ದಾಳೆ. ಕೇರಳ ಮೂಲದ ಕೋಳಿ ಸಾಗಾಟದ ವಾಹನ ಸವಾರ ಕನ್ಯಾನ ಪೆಟ್ರೋಲ್ ಬಂಕ್ ಬಳಿ ಕೇರಳದ ಲಾರಿ ನಿಲ್ಲಿಸಿದ್ದ. ರಾತ್ರಿ ಸುಮಾರು 2 ಗಂಟೆಗೆ ರಸ್ತೆಯಲ್ಲಿ ಬಿಳಿ ಬಣ್ಣದ ಸೀರೆ ಉಟ್ಟ ಮಹಿಳೆ ಓಡಾಡುವುದನ್ನ ಗಮನಿಸಿದ್ದಾನೆ. ಬಳಿಕ ಲಾರಿಯ ಹೆಡ್ ಲೈಟ್ ಹಾಕಿ ನೋಡಿದಾಗ ಮಾಯವಾಗಿದೆ. ಇಂತಹ ಹತ್ತಾರು ಘಟನೆಗಳು ನಡೆದಿವೆ ಎನ್ನಲಾಗಿದ್ದು ಕನ್ಯಾನ ಭಾಗದ ಸುತ್ತಮುತ್ತ ರಾತ್ರಿ ಹೊತ್ತು ಸಂಚರಿಸುವಾಗ ಒಬ್ಬೊಬ್ಬರಾಗಿ ಹೋಗಬೇಡಿ ಎಂದು ಆ ಭಾಗದ ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

error: Content is protected !!