ಹಾವೇರಿ: ಮಾಸೂರು ಗ್ರಾಮದ ಯುವತಿ ಸ್ವಾತಿ ಕೊಲೆಯಾಗಿರುವ ಪ್ರಕರಣದಲ್ಲಿ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರ್ಚ್ 6 ರಂದು ರಾಣೆಬೆನ್ನೂರು ತಾಲೂಕಿನ ಪತ್ತೆಪುರ ಬಳಿ ಸ್ವಾತಿಯ ಶವ ಪತ್ತೆಯಾಗಿತ್ತು. ಆದರೆ, ಪೊಲೀಸರು ಶವವನ್ನು ಗುರುತಿಸಲು ಸಾಧ್ಯವಾಗದೆ ಅಪರಿಚಿತ ಶವ ಎಂದು ಭಾವಿಸಿ ಹಲಗೇರಿ ಪೊಲೀಸರಿಂದ ಅಂತ್ಯಕ್ರಿಯೆ ಮಾಡಿಸಿದ್ದರು. ಈಗ ಸ್ವಾತಿಯ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಸಾಮಾನ್ಯವಾಗಿ ಪೊಲೀಸರು ಯಾವುದೇ ಅಪರಿಚಿತ ಶವ ಸಿಕ್ಕಾಗ ಕನಿಷ್ಠ ಆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್‌ಗಳನ್ನು ನೋಡಿ ಅವರಿಗೆ ತಿಳಿಸುತ್ತಾರೆ. ಅದರಲ್ಲೂ ಮಹಿಳೆ, ಯುವತಿ, ಅಪ್ರಾಪ್ತ ಯುವತಿ ಆಗಿದ್ದಲ್ಲಿ ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಈ ಕೆಲಸ ಮಾಡುತ್ತಾರೆ. ಆದರೆ, ಹಾವೇರಿಯ ಜಿಲ್ಲೆಯಲ್ಲಿ ಹದಿಹರೆಯದ 22 ವರ್ಷ ವಯಸ್ಸಿನ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿದ್ದಾರೆ.
22 ವರ್ಷದ ಸ್ವಾತಿ ಮಾರ್ಚ್ 3 ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಮನೆಯವರೆಲ್ಲಾ ಹುಡುಕಿ 7ನೇ ತಾರೀಖಿನಿಂದ ಮಿಸ್ಸಿಂಗ್ ದೂರು ದಾಖಲಿಸಿದ್ದರು. ಈಕೆಯ ಶವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮಾರ್ಚ್ 6 ರಂದು ಯುವತಿಯ ಮೃತದೇಹ ಸಿಕ್ಕಿತ್ತು.