“ಬದುಕಿ ಬದುಕಲು ಬಿಡುವುದೇ ಧರ್ಮದ ಸಾರ“ -ಗುರುದೇವಾನಂದ ಸ್ವಾಮೀಜಿ

ತಣ್ಣೀರುಬಾವಿ ಬೀಚ್ ನಲ್ಲಿ ಮೂರು ದಿನಗಳ ಮಂಗಳೂರು ಬೀಚ್ ಫೆಸ್ಟಿವಲ್-ಟ್ರಯಾಥ್ಲನ್ ಉದ್ಘಾಟನೆ

ಮಂಗಳೂರು: ಕ್ರೀಡೆ, ಮನೋರಂಜನೆ ಮತ್ತು ತುಳುನಾಡಿನ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೂರನೇ ಆವೃತ್ತಿಯ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಹಾಗೂ ತಪಸ್ಯಾ ಫೌಂಡೇಶನ್ ಸಾರಥ್ಯದಲ್ಲಿ ನಡೆಯಲಿರುವ ಮೂರು ದಿನಗಳ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಟ್ರಯಾಥ್ಲನ್ ಶುಕ್ರವಾರ ಸಂಜೆ ತಣ್ಣೀರುಬಾವಿ ಬೀಚ್ ನಲ್ಲಿ ಶುಭಾರಂಭಗೊಂಡಿತು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹಿಂಗಾರದ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಆಶೀರ್ವಚನದ ಮಾತುಗಳನ್ನಾಡಿದರು.
“ಮನುಷ್ಯನ ಬದುಕಿಗೆ ಗುರು ಮತ್ತು ಗುರಿಯಿರಬೇಕು ಇಲ್ಲದಿದ್ದರೆ ಯಾವ ಕೆಲಸ ಕೂಡಾ ಸಾಕಾರಗೊಳ್ಳುವುದಿಲ್ಲ. ತಪಸ್ಯಾ ಫೌಂಡೇಶನ್ ಇಂತಹ ಶ್ರೇಷ್ಠ ಕೆಲಸವನ್ನು ಸೇವೆಯ ಮೂಲಕ ಮಾಡುತ್ತಿದೆ. ಬದುಕಿ ಬದುಕಲು ಬಿಡುವುದೇ ಧರ್ಮದ ಸಾರವಾಗಿದೆ. ನಾವು ಜಾತಿಮತಗಳ ಬಗ್ಗೆ ಅಲ್ಲ ಮಾನವನ ಬಗ್ಗೆ ಚಿಂತನೆ ಮಾಡಬೇಕಿದೆ. ಇನ್ನೊಬ್ಬರಿಗೆ ಉಪಕರಿಸಿ ಬದುಕುವ ಮೂಲಕ ಫೌಂಡೇಶನ್ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇದಕ್ಕಾಗಿ ಸಂಘಟನೆಗೆ ಅಭಿನಂದನೆಗಳು“ ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತಾಡಿ, “ಮಂಗಳೂರಿನ ಜನರ ನಡುವಿನ ಏಕತೆ ಸಾಮರಸ್ಯವನ್ನು ಬೇರೆಡೆಗೂ ಪಸರಿಸಬೇಕು ಎನ್ನುವ ಆಶಯ ನಮ್ಮ ರಾಜ್ಯ ಸರಕಾರದ್ದು. ನಮ್ಮಲ್ಲಿನ ಯುವಕರ, ಮಕ್ಕಳ ಪ್ರತಿಭೆಯನ್ನು ಹೊರಗಡೆ ಜಗತ್ತಿಗೆ ತೋರಿಸಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸ್ತುತ್ಯರ್ಹ. ಇಲ್ಲಿಗೆ ಬಂದಮೇಲೆ ಇಲ್ಲಿನ ವಿವಿಧ ಕಾರ್ಯಕ್ರಮಗಳು, ಕೃಷಿ ಮೇಳ, ಕ್ರೀಡಾ ಚಟುವಟಿಕೆಗಳನ್ನು ನೋಡುವಾಗ ನಮ್ಮ ಆಶಯ ನೆರವೇರಿದ ಖುಷಿಯಾಗುತ್ತಿದೆ. ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ತಪಸ್ಯಾ ಫೌಂಡೇಶನ್ ಹಮ್ಮಿಕೊಂಡಿರುವ ಬೀಚ್ ಫೆಸ್ಟಿವಲ್ ಯಶಸ್ವಿಯಾಗಿ ನಡೆಯಲಿ. ಮಂಗಳೂರಿನ ಜನತೆಗೆ ಇಂತಹ ಉತ್ಸವಗಳು ಹೆಚ್ಚಿನ ಶಕ್ತಿಯನ್ನು ನೀಡಲಿ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ“ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಕುಸ್ತಿ ಫೆಡರೇಷನ್ ಚೇರ್ ಮೆನ್ ಗುಣರಂಜನ್ ಶೆಟ್ಟಿ, ಗುರುನಾಥೇ ಗೌಡ, ಡಾ.ಚಂದ್ರೇ ಗೌಡ, ಪದ್ಮಶ್ರೀ ಡಾ.ಉದಯ್ ದೇಶಪಾಂಡೆ, ಡಾ.ಕರುಣಾ ಸಾಗರ್, ಇಂದ್ರಾಣಿ ಕರುಣಾ ಸಾಗರ್, ಐಡಿಎಫ್ ಸಿ ಬ್ಯಾಂಕ್ ನ ಹರ್ಷ ಗೌಡ, ಬಿ.ಎನ್.ಶೆಟ್ಟಿ, ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ, ನವೀನ್ ಹೆಗ್ಡೆ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪಿ.ಎಲ್. ಧರ್ಮ ಮತ್ತಿತರರು ಉಪಸ್ಥಿತರಿದ್ದರು.

ದಿವ್ಯಾ ವಸಂತ ಶೆಟ್ಟಿ ದೇವರನ್ನು ಸ್ತುತಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎನ್.ಬಿ.ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.

error: Content is protected !!