“ವಿಶ್ವ ಸಮ್ಮೇಳನದ ಮೂಲಕ ಬಿಲ್ಲವರು ಒಗ್ಗಟ್ಟಾಗಬೇಕು” -ಯು.ಟಿ.ಖಾದರ್


ಅಗ್ಗಿದಕಳಿಯ: ವಿಶ್ವ ಸಮ್ಮೇಳನ ಉದ್ಘಾಟನೆ, ಬಿಲ್ಲವ ರತ್ನ ಪ್ರಶಸ್ತಿ ಪ್ರದಾನ

ಸುರತ್ಕಲ್:‌ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಬಿಲ್ಲವರ 26 ಪಂಗಡಗಳ ವಿಶ್ವ ಸಮ್ಮೇಳನ ಉದ್ಘಾಟನೆ ಹಾಗೂ ಬಿಲ್ಲವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಸಸಿಹಿತ್ಲು ಕಡಲಕಿನಾರೆಯ ದಿ.ಕಾಂತು ಲಕ್ಕಣ್ಣ ಗುರಿಕಾರರು ಯಾನೇ ಪಠೇಲ್ ಯಾದವ ಜಿ.ಬಂಗೇರ ವೇದಿಕೆಯಲ್ಲಿ ಜರುಗಿತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ ಅವರು, “ವಿಶ್ವ ಸಮ್ಮೇಳನ ಕೇವಲ ಸಮ್ಮೇಳನವಾಗಿ ಉಳಿಯದೇ ಸಮಸ್ತ ಬಿಲ್ಲವರ ಒಗ್ಗಟ್ಟಿನ ಆರಂಭವಾಗಬೇಕು. ಬಿಲ್ಲವ ಸಮಾಜ ಸ್ವಾಭಿಮಾನಿ ಸಮಾಜವಾಗಿದ್ದು, ಸಮಸಮಾಜದಲ್ಲಿನ ಸಣ್ಣ ಸಮಾಜದವರಿಗೆ ಆತ್ಮವಿಶ್ವಾಸ ನೀಡಿ ಅವುಗಳನ್ನು ಶಕ್ತಿವಂತರನ್ನಾಗಿಸುವ ಶಕ್ತಿ ಬಿಲ್ಲವ ಸಮಾಜಕ್ಕಿದೆ. ಪ್ರತೀ ಕುಟುಂಬ ಸಂತೃಪ್ತರಾಗಿ ಬಲಿಷ್ಠವಾಗಿದ್ದರೆ ದೇಶವೂ ಸಂತೃಪ್ತವಾಗಿ ಬಲಿಷ್ಠವಾಗಲಿದೆ. ಆ ನಿಟ್ಟಿನಲ್ಲಿ ಬಿಲ್ಲವ ಸಮುದಾಯ ಸಕಾರಾತ್ಮಕ ಚಿಂತನೆಗಳೊಂದಿಗೆ ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಗಳಾಗಬೇಕು“ ಎಂದರು.

ಶೈಕ್ಷಣಿಕವಾಗಿ ‌ಮುಂದಿರುವ ಆರ್ಥಿಕವಾಗಿ ಹಿನ್ನಡೆಯಿಂದ ಶಿಕ್ಷಣ ವಂಚಿತಗುವ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಮೇಲಿದೆ. ಜಾತಿ, ಧರ್ಮಗಳನ್ನು ಬದಿಗಿಟ್ಟು ಎಲ್ಲರನ್ನೂ ಪ್ರೀತಿಸುತ್ತಾ ಸಮಾನ ದೃಷ್ಟಿಯಿಂದ ಒಗ್ಗೂಡಿಸುವ ಕೆಲಸ ಆಗಬೇಕೆಂದು ನುಡಿದ ಅವರು, ಹಿರಿಯರು ಹುಟ್ಟುಹಾಕಿರುವ ಸಂಘವನ್ನು ಮುಂದಿನ ತಲೆಮಾರಿಗೂ ಮುಟ್ಟಿಸಿ ಅವರೂ ಇಂದಿನಂತೆ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಅಗ್ಗಿದ ಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಶುಭಹಾರೈಸಿದರು.

ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮೀಜಿ, ವಿಖ್ಯಾತನಂದ ಸ್ವಾಮೀಜಿ, ಸುವರ್ಣ ಬಾಬ ಸ್ವಾಮೀಜಿ, ನಿಪ್ಪಾಣಿ ಮಠದ ಅರುಣಾನಂದ ಸ್ವಾಮೀಜಿ ಅವರು ಆಶೀರ್ವಾದದ ನುಡಿಗಳನ್ನಾಡಿದರು. ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್
ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಮುಂಬೈ ಇದರ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಅವರಿಗೆ ಬಿಲ್ಲವರತ್ನ, ಗುಜರಾತ್‌ ಉದ್ಯಮಿ ದಯಾನಂದ ಬೋಂಟ್ರ ಅವರಿಗೆ ಬಿಲ್ಲವ ಸುವರ್ಣ ರತ್ನ, ಒಮಾನ್‌ ಬಿಲ್ಲವಾಸ್‌ ನ ಮಾಜಿ ಅಧ್ಯಕ್ಷ ಎಸ್.ಕೆ. ಪೂಜಾರಿ ಹಾಗೂ ಬಿಲ್ಲವ ಫ್ಯಾಮಿಲಿ ದುಬೈ ಸಂಘಟನೆಗೆ ಬಿಲ್ಲವ ಸೇವಾರತ್ನ, ಗರೋಡಿ ಸ್ಟೀಲ್‌ ಮಾಲಕ ಮನೋಜ್‌ ಸಲಿಪಳ್ಳ ಅವರಿಗೆ ಬಿಲ್ಲವ ಯುವ ರತ್ನ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಸಾಗರದ ಶಾಸಕ ಬೇಲೂರು ಗೋಪಾಲಕೃಷ್ಣ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಂಸ್ಥೆಯ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಅಖಿಲ ಭಾರತ ಬಿಲ್ಲವ ಯೂನಿಯನ್ ನ ನವೀನ್ ಚಂದ್ರ ಸುವರ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ್, ನಟ ಸುಮನ್ ತಲ್ವಾರ್, ಶ್ರೀಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಬಿಲ್ಲವ ಸಮುದಾಯದ ಪ್ರಮುಖರಾದ ಬಿ.ಎನ್. ಶಂಕರ್, ಹರೀಶ್ ಜಿ.ಅಮೀನ್, ವೇದಕುಮಾರ್, ವಿಶ್ವನಾಥ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಮನೋಜ್ ಕುಮಾರ್, ಚಂದ್ರಹಾಸ್ ಅಮೀನ್, ಲೋಕೇಶ್ ಕೋಟ್ಯಾನ್, ದೀಪಕ್ ಪೂಜಾರಿ, ಸಂದೀಪ್ ಪೂಜಾರಿ, ಕೃಷ್ಣ ಸುವರ್ಣ, ಶಾರದಾ ಸೂರು ಕರ್ಕೇರ, ಸತೀಶ್ ಪೂಜಾರಿ, ಬಾಬು ಶಿವ ಪೂಜಾರಿ, ಅಚ್ಯುತ್ ಅಮೀನ್ ಕಲ್ಮಾಡಿ, ಎಸ್.ಕೆ. ಸಾಲಿಯಾನ್, ಪದ್ಮರಾಜ್, ಶೇಖರ ಪೂಜಾರಿ ಪೂನಾ ನಾಗರಾಜ್, ವೆಂಕಟೇಶ್, ನಾರಾಯಣ ಗುತ್ತೆದಾರ್, ಸಮಿತಿಯ ರಮೇಶ್ ಪೂಜಾರಿ ಚೇಳಾಯರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ವಂದಿಸಿದರು. ಚಂದ್ರಹಾಸ್, ಸ್ಮಿತೇಶ್ ನಿರೂಪಿಸಿದರು.

error: Content is protected !!