ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ ಕೃಷ್ಣಪ್ಪ ಬಣ, ದ.ಕ ಜಿಲ್ಲಾ ಶಾಖೆಯು ಭಾರತ ಸಂವಿಧಾನ ಜಾರಿಯಾಗಿ 75ನೇ ವರ್ಷಾಚರಣೆ ಹಾಗೂ ದಲಿತ ಸಂಘರ್ಷ ಸಮಿತಿಯ 50ರ ಸಂಭ್ರಮಾಚರಣೆಯ ಅಂಗವಾಗಿ “ಭಾರತದ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು” ಹಾಗೂ ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ ಹಾಗೂ ನಮ್ಮ ಮುಂದಿರುವ ಸವಾಲುಗಳು” ಎಂಬ ವಿಷಯದ ಕುರಿತಾಗಿ ‘ವಿಚಾರ ಸಂಕಿರಣ’ ಕಾರ್ಯಕ್ರಮವನ್ನು ಜನವರಿ 27ರ ಸೋಮವಾರ ಬೆಳಗ್ಗೆ 11.00 ಗಂಟೆಗೆ
ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ ಎಂದು ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಂವಿಧಾನದ ಆಶಯಗಳ ಕುರಿತು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹಾಗೂ ಬರಹಗಾರ ಶಿವಸುಂದರ್ ಹಾಗೂ ದಲಿತ ಚಳುವಳಿಯ ಕುರಿತು ಕರ್ನಾಟಕ ಕೇಂದ್ರೀಯ ವಿ.ವಿ ಕಲಬುರಗಿ ಇದರ ಪ್ರಾಧ್ಯಾಪಕರಾದ ಅಪ್ಪೆಗೆರೆ
ಸೋಮಶೇಖರ್ ವಿಚಾರ ಮಂಡಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈಯವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ವಹಿಸಲಿದ್ದು, ಡಾ| ಬಿ.ಆರ್ ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಭಾವಚಿತ್ರಕ್ಕೆ ದ.ಸಂ.ಸ ರಾಜ್ಯ ಸಂ. ಸಂಚಾಲಕರಾದ ಎಂ.ದೇವದಾಸ್ ಮಾಲಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿವೈ ಎಫ್ ಐ ಮಾಜಿ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ದ.ಸಂ.ಸ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ದಲಿತ ನೌಕರರ ಒಕ್ಕೂಟದ ದ.ಕ. ಜಿಲ್ಲಾ ಉಸ್ತುವಾರಿ ಹೆಚ್.ಡಿ ಲೋಹಿತ್, ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್, ದ.ಸಂ.ಸ ಹಿರಿಯ ಮುಖಂಡರಾದ ಆನಂದ ಮಿತ್ತಬೈಲ್ ಭಾಗವಹಿಸಲಿದ್ದಾರೆ.