ಮಂಗಳೂರು: ಬೆಳೆಯುತ್ತಿರುವ ಮಂಗಳೂರಿಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸ್ಟ್ರೀಟ್ ಫುಡ್ ಫಿಯೆಸ್ಟಾ ಆಯೋಜನೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ಮಂಗಳೂರು ಮಾತ್ರವಲ್ಲದೆ ಹೊರಗಿನ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಬಾರಿ ಸೋಷಿಯಲ್
ಮೀಡಿಯಾ ಸೆನ್ಶೇಷನ್ ಆಗಿರುವ ಡಾಲಿ ಚಾಯ್ ವಾಲಾ ನನ್ನು ಕರೆಸುವ ಮೂಲಕ ಫುಡ್ ಫೆಸ್ಟಿವಲ್ ಭಾರೀ ಸದ್ದು ಮಾಡಿದೆ. ಆದರೆ ಈ ಮಧ್ಯೆ ಹಾಲಿ ಸಂಸದರ ಆಪ್ತನೊಬ್ಬನ ನಡವಳಿಕೆ ಮಾತ್ರ ಬಿಜೆಪಿ ಪಕ್ಷದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಸಂಸದ ಮತ್ತು ಶಾಸಕರ ಬೆಂಬಲಿಗರ ನಡುವೆ ಜಟಾಪಟಿ ನಡೆದಿರುವ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು ಜನರು ಹೌದಾ ಮಾರಾಯ್ರೆ ಅಂತ ಕಾತರದಿಂದ ಪ್ರಶ್ನೆ ಮಾಡುತ್ತಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಮತ್ತು ಸಂಸದ ಬೃಜೇಶ್ ಚೌಟ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಮೆಂಟ್‌ಗಳು ಕಾಣಿಸಿಕೊಂಡಿರುವುದು ಪಕ್ಷದಲ್ಲಿ ಏನೇನೂ ಸರಿಯಿಲ್ಲ ಎನ್ನುವ ವಾದಕ್ಕೆ ತುಪ್ಪ ಸುರಿದಂತಾಗಿದೆ.
ಸ್ಟ್ರೀಟ್ ಫುಡ್ ಫೆಸ್ಟ್‌ಗೆ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ್ದ ಬ್ರಿಜೇಶ್ ಚೌಟ ಅವರನ್ನು ಶಾಸಕ ವೇದವ್ಯಾಸ ಕಾಮತ್ ವೇದಿಕೆಗೆ ಆಹ್ವಾನಿಸಿದಾಗ ಸಂಸದರು ವೇದಿಕೆ ಹತ್ತಲು ನಿರಾಕರಿಸಿದರೆನ್ನಲಾಗಿದೆ. ಸಂಸದರಿಗೆ ವೇದಿಕೆ ಹತ್ತದಂತೆ ಅವರ ಆಪ್ತರೊಬ್ಬರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದು ಬಂದಿದೆ.
ಶಾಸಕ ಕಾಮತ್ ಪಿಲಿ ಪರ್ಬ, ಸ್ಟ್ರೀಟ್ ಫುಡ್ ಫೆಸ್ಟಿವಲ್ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಂಗಳೂರಿನ ಹೆಸರನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದ್ದು ಇದಕ್ಕೆ ಮಾಜಿ ಸಂಸದ ಕಟೀಲ್ ಜೊತೆಯಾಗಿದ್ದಾರೆ. ಪರಸ್ಪರ ಭಿನ್ನಾಭಿಪ್ರಾಯ ಏನೇ ಇದ್ರೂ ಪಕ್ಷದ ನಾಯಕರು ಕರೆದಾಗ ಅದನ್ನೆಲ್ಲ ಬದಿಗಿಟ್ಟು ವೇದಿಕೆ ಹತ್ತಬೇಕಿತ್ತು ಅನ್ನುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮಾತಾಗಿದೆ.