ಧಾರ್ಮಿಕ–ಸಾಂಸ್ಕೃತಿಕ ವೈಭವಕ್ಕೆ ಸಕಲ ಸಿದ್ಧತೆ
* 2 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರ
* ನಾಗಬನ, ರಾಜಗೋಪುರ ನಿರ್ಮಾಣ
ಮಂಗಳೂರು: ನೀರುಮಾರ್ಗ ಸಮೀಪದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆಬ್ರವರಿ 2ರಿಂದ 11ರವರೆಗೆ ಭಕ್ತಿಭಾವ ಮತ್ತು ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ.2ರಂದು ಬೆಳಿಗ್ಗೆ 8 ಗಂಟೆಗೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ. ಅದೇ ದಿನ ಸಂಜೆ ಸ್ಥಳೀಯ ಕಲಾವಿದರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಫೆ.3ರಿಂದ ಫೆ.7ರವರೆಗೆ ಮಹಾಮೃತ್ಯುಂಜಯ ಯಾಗ, ನಾಗಾಲಯ ಪ್ರತಿಷ್ಠೆ, ಆಶ್ಲೇಷಾಬಲಿ, ನವಗ್ರಹ ಶಾಂತಿ ಹೋಮ, ಚಂಡಿಕಾಹೋಮ, ಧ್ವಜಾಧಿವಾಸ, ವಿವಿಧ ದೇವರ ಪ್ರತಿಷ್ಠೆಗಳು ನಡೆಯಲಿದ್ದು, ಪ್ರತಿದಿನವೂ ಸಂಜೆ ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ತಾಳಮದ್ದಳೆ, ಭಕ್ತಿಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ.

ಫೆ.5ರಂದು ಬೆಳಿಗ್ಗೆ 8.07ಕ್ಕೆ ಶ್ರೀ ಸುಬ್ರಾಯ ದೇವರ ಪ್ರತಿಷ್ಠೆ ನೆರವೇರಲಿದೆ. ಫೆ.8ರಂದು ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಬ್ರಹ್ಮಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಫೆ.9ರಂದು ಮಧ್ಯಾಹ್ನ 12ಕ್ಕೆ ರಥೋತ್ಸವ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಗಜ ವಾಹನ ಸೇವೆ, ತೆಪ್ಪೋತ್ಸವ ಹಾಗೂ ಕೆರೆದೀಪೋತ್ಸವ ನಡೆಯಲಿದೆ. ಫೆ.10ರಂದು ಕವಾಟೋದ್ಘಾಟನೆ, ರಾತ್ರಿ ರಥೋತ್ಸವ, ಅವಭ್ರತ ಸ್ನಾನ, ಧ್ವಜಾವರೋಹಣ ಹಾಗೂ ನೇಮೋತ್ಸವಗಳು ನಡೆಯಲಿವೆ. ಫೆ.11ರಂದು ಬೆಳಿಗ್ಗೆ ಸಂಪ್ರೋಕ್ಷಣೆ ಕಲಶದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಇದಕ್ಕೂ ಮುನ್ನ ಫೆ.1ರಂದು ಸಂಜೆ 3 ಗಂಟೆಗೆ ಏಳು ಗ್ರಾಮಗಳಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನೀರುಮಾರ್ಗದಿಂದ ಮಾಣೂರು ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.
ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಶಿಧರ್ ಭಟ್ ಬೊಳ್ಮಾರಗುತ್ತು ಮಾತನಾಡಿ, ಮಾಣೂರು ಕ್ಷೇತ್ರವು ಮಣ್ವ ಋಷಿಗಳು ತಪಸ್ಸು ಮಾಡಿ ಶ್ರೀ ಸುಬ್ರಾಯ ದೇವರನ್ನು ಒಲಿಸಿ ಪ್ರತಿಷ್ಠಾಪಿಸಿದ ಪೌರಾಣಿಕ ಪುಣ್ಯ ಭೂಮಿಯಾಗಿದೆ. ಇದು ತುಳುವ ನಾಡಿನ ಪ್ರಮುಖ ನಾಗಾರಾಧನಾ ಕೇಂದ್ರವಾಗಿದ್ದು ‘ಸ್ವರ್ಣ ಕೇದಗೆ’ಯ ಬೀಡಾಗಿ ಪ್ರಸಿದ್ಧವಾಗಿದೆ. ಕೇದಾರ ಎಂಬ ಬ್ರಾಹ್ಮಣ ದಂಪತಿ ಈ ಕ್ಷೇತ್ರದಲ್ಲಿ ದೇವರನ್ನು ಭಕ್ತಿಯಿಂದ ಆರಾಧಿಸುತ್ತಿದ್ದರು. ಸಂತಾನವಿಲ್ಲದ ಸಂದರ್ಭದಲ್ಲಿ ನಾಗರ ಹಾವು ತನ್ನ ಬಾಯಲ್ಲಿ ತತ್ತಿಯನ್ನು ಹಿಡಿದು ಸಂಚರಿಸುವ ದೃಶ್ಯವನ್ನು ಕಂಡು ಭಕ್ತಿಯಿಂದ ಪ್ರಾರ್ಥಿಸಿದ ಪರಿಣಾಮ ಅವರಿಗೆ ಸಂತಾನ ಲಭಿಸಿತು ಎಂಬ ಪೌರಾಣಿಕ ಹಿನ್ನೆಲೆ ಈ ಕ್ಷೇತ್ರಕ್ಕೆ ಇದೆ ಎಂದು ಹೇಳಿದರು.

ಪೂರ್ವದಲ್ಲಿ ಈ ದೇವರು ಅನಂತ ಪದ್ಮನಾಭ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಿದ್ದರು. ಕಳೆದ ವರ್ಷದ ಜುಲೈ ತಿಂಗಳಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯ ಪ್ರಕಾರ, ಅನಂತ ಪದ್ಮನಾಭ ದೇವರು ಶ್ರೀ ಬೊಳ್ಳಾರಗುತ್ತಿನಲ್ಲಿ ಹಾಗೂ ಶ್ರೀ ಸುಬ್ರಾಯ ದೇವರು ಶ್ರೀ ಗಣಪತಿ ಮತ್ತು ಶ್ರೀ ಪಾರ್ವತಿ ಸಮೇತರಾಗಿ ಮಾಣೂರು ಕ್ಷೇತ್ರದಲ್ಲಿ ನೆಲೆನಿಂತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಈ ಕ್ಷೇತ್ರಕ್ಕೆ ‘ಶ್ರೀ ಸುಬ್ರಾಯ ಕ್ಷೇತ್ರ’ ಎಂಬ ಹೆಸರು ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಕ್ಷೇತ್ರದಲ್ಲಿ ನವಿಲು ನಾಟ್ಯ ಮಾಡುವುದು ವಿಶೇಷ ಎನಿಸಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತನಾಡಿ, ಕೇವಲ ಎರಡು ತಿಂಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ಅನೇಕ ದಾನಿಗಳ ಸಹಕಾರ ದೇವರ ಅನುಗ್ರಹಕ್ಕೆ ಸಾಕ್ಷಿಯಾಗಿದೆ. ಬ್ರಹ್ಮಕಲಶೋತ್ಸವವಕ್ಕೆ ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು. ಫೆ.1ರಂದು ಸಂಜೆ 3.00ರಿಂದ: ಸೀಮೆಗೆ ಸಂಬಂಧಪಟ್ಟ 7 ಗ್ರಾಮಗಳು ಹಾಗೂ ನಾನಾ ಕಡೆಯಿಂದ ಆಗಮಿಸಿದ ಹಸಿರು ಹೊರೆಕಾಣಿಕೆ ಮೆರವಣಿಗೆಯು ನೀರುಮಾರ್ಗ ಜಂಕ್ಷನ್ ನಿಂದ ಮಾಣೂರು ಕ್ಷೇತ್ರಕ್ಕೆ ಹೊರಡಲಿದೆ. ಈ ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು, ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ್ ಕೆ., ಆನಂದ್ ಸರಿಪಲ್ಲ, ಪ್ರಧಾನ ಅರ್ಚಕರಾದ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಜೆ. ಮಾಣೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ಪಡು, ಉಪಾಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಎನ್ ವಿಕೆ ಭಟ್ರಕೋಡಿ ಉಪಸ್ಥಿತರಿದ್ದರು.

