ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ನಾನ್‌ವೆಜ್’ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಸೂರಜ್ ಶೆಟ್ಟಿ ನಿರ್ದೇಶನದ ಈ ಸಿನೆಮಾ ಫೆ.6ರಂದು ಬಿಡುಗಡೆಗೊಳ್ಳಲಿದೆ.

ಟೀಸರ್‌ನಲ್ಲಿರುವ ಪ್ರತಿಯೊಂದು ಅಂಶವೂ ಕುತೂಹಲ ಕೆರಳಿಸುತ್ತಿದ್ದು, ಒಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಸಿನೆಮಾವನ್ನು ಹಾಸ್ಯಮಯವಾಗಿ ಕೊಂಡೊಯ್ಯಲಾಗಿದೆ ಎಂಬುದನ್ನು ಟೀಸರ್ ತೋರಿಸುತ್ತಿದೆ. ಟ್ರೆಂಡ್‌ನಲ್ಲಿರುವ ಎಲ್ಲ ಪ್ರಮುಖ ಕಲಾವಿದರೂ ಈ ಸಿನೆಮಾದಲ್ಲಿದ್ದಾರೆ. ನಾನು ಕೂಡ ಒಂದು ಗೌರವ ಪಾತ್ರದಲ್ಲಿ ಕಾಣಸಿಕೊಂಡಿದ್ದೇನೆ ಎಂದು ಹಿರಿಯ ನಟ ನವೀನ್ ಡಿ.ಪಡೀಲ್ ಅವರು ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗು ಕೇಳುವ ಮುಗ್ಧತೆಯ ಪ್ರಶ್ನೆಗಳು ‘ನಾನ್ ವೆಜ್’ ಸಿನೆಮಾದ ಪ್ರಮುಖ ಅಂಶವಾಗಿದ್ದು ಆ ಪ್ರಶ್ನೆಗಳಿಗೆ ಸಿಗುವ ಉತ್ತರ, ಪ್ರಶ್ನೆಗಳಿಂದ ಉಂಟಾಗುವ ಸನ್ನಿವೇಶಗಳು, ತೆರೆದುಕೊಳ್ಳುವ ಕತೆ ಸಿನೆಮಾವನ್ನು ಅದ್ಭುತವನ್ನಾಗಿಸಿದೆ ಎಂದು ಸಿನೆಮಾ ತಂಡ ತಿಳಿಸಿದೆ.

ಸು ಫ್ರಂ ಸೋ ಸಿನೆಮಾದ ಹಲವಾರು ಖ್ಯಾತನಾಮರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಸಂಜನಾ ಬುರ್ಲಿ ಹಾಗೂ ನಾಯಕನಾಗಿ ಮಂಗಳೂರಿನ ಭರವಸೆಯ ಯುವ ನಟ ಅಥರ್ವ ಪ್ರಕಾಶ್ ಅಭಿನಯಿಸಿದ್ದಾರೆ. ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಪ್ರಕಾಶ್ ತುಮಿನಾಡ್, ಪುಷ್ಪರಾಜ್ ಬೊಳ್ಳಾರ್, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ, ನವೀನ್ ಡಿ ಪಡೀಲ್ ತಾರಾಗಣದಲ್ಲಿದ್ದಾರೆ.