ಧಾರವಾಡ: ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ಡಾ.ಪ್ರಜ್ಞಾ ಪಾಲೇಗರ್(24) ಮೃತ ವಿದ್ಯಾರ್ಥಿನಿ.

ಡಾ. ಪ್ರಜ್ಞಾ ಪಾಲೇಗರ್ ಶಿವಮೊಗ್ಗ ಮೂಲದವರಾಗಿದ್ದು, ಇವರು ಧಾರವಾಡದಲ್ಲಿ ವ್ಯಾಸಾಂಗ ಮಾಡುತ್ತಿರುವ ಹಿನ್ನಲೆಯಲ್ಲಿ ಡಾ. ಪ್ರಿಯಾ ಪಾಟೀಲ್ ಜೊತೆ ಹಾಸ್ಟೆಲ್ ರೂಮ್ ಶೇರ್ ಮಾಡಿಕೊಂಡಿದ್ದಳು, ಆದರೆ ನಿನ್ನೆ ಈಕೆಯ ಪೋಷಕರು ಬಂದಿರುವ ಕಾರಣ ಪ್ರಿಯಾ ಹೊರಗಡೆಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ರಾತ್ರಿ ಒಬ್ಬಳೇ ರೂಮಿನಲ್ಲಿದ್ದ ಡಾ. ಪ್ರಜ್ಞಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಪ್ರಿಯಾ ರೂಮಿಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ವ್ಯಾಸಾಂಗ ಮಾಡಲು ಮನಸ್ಸಿಲ್ಲದ ಹಿನ್ನೆಲೆಯಲ್ಲಿ ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.