ಪೆದಮಲೆ ವಾಜಿಲ್ಲಾಯ-ಧೂಮಾವತಿ ದೈವಸ್ಥಾನದ ಆಮಂತ್ರಣ ಪತ್ರ ಬಿಡುಗಡೆ!
ಫೆ.18ರಿಂದ 22ರವರೆಗೆ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಉತ್ಸವ.
ನೀರ್ ಮಾರ್ಗ: 300 ವರ್ಷಗಳ ಬಳಿಕ ನಡೆಯಲಿರುವ ಶ್ರೀ ಕ್ಷೇತ್ರ ಪೆದಮಲೆ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಉದ್ಘಾಟನಾ ಸಮಾರಂಭ ನೀರ್ ಮಾರ್ಗದ ಪೆದಮಲೆ ಕ್ಷೇತ್ರದಲ್ಲಿ ಆದಿತ್ಯವಾರ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು, “ದೈವದ ಕಾರ್ಯ ದೈವೇಚ್ಛೆಯಂತೆಯೇ ನೆರವೇರುತ್ತದೆ. ಆಮಂತ್ರಣ ಪತ್ರಿಕೆ ನಾವು ಮುದ್ರಿಸಿ ಮನೆಮನೆಗೆ ಹಂಚಬಹುದು ಆದರೆ ಅದಕ್ಕೆ ಬೇಕಾದುದನ್ನು ದೈವ ಸಂಕಲ್ಪದಂತೆಯೇ ಪಡೆದುಕೊಳ್ಳುತ್ತದೆ. ಹಾಗೆಯೇ ಗ್ರಾಮದ ಪ್ರತೀ ಮನೆಗಳಲ್ಲಿ ಭಕ್ತರನ್ನು ಎಚ್ಚರಿಸುವ ಕೆಲಸವನ್ನು ದೈವ ಮಾಡುತ್ತದೆ. ನಾವೆಲ್ಲರೂ ಇಲ್ಲಿ ನಿಮಿತ್ತ ಮಾತ್ರ. ಗ್ರಾಮದ ದೈವ ಎದ್ದುನಿಂತಿದೆ ಎಂದರೆ ಗ್ರಾಮ ಅಭಿವೃದ್ಧಿಯನ್ನು ಹೊಂದುತ್ತದೆ. ಇಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ತುಳುನಾಡಿನ ದೈವಾರಾಧನೆಯ ಆಚಾರ ವಿಚಾರಕ್ಕೆ ಯಾವುದೇ ಭಂಗ ಬಾರದ ರೀತಿಯಲ್ಲಿ ನಡೆಯಲಿ. ತುಳುನಾಡಿನಲ್ಲಿ ದೈವಾರಾಧನೆಯೇ ಪ್ರಾಮುಖ್ಯವಾಗಿದ್ದು ಗ್ರಾಮದ ಜನರೆಲ್ಲರೂ ಇದರಲ್ಲಿ ತೊಡಗಿಕೊಳ್ಳುವಂತಾಗಲಿ“ ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಮಾತಾಡಿ, ”ಇಲ್ಲಿ ಸಿಕ್ಕಿರುವ ದೈವಗಳ ಹಿಂದಿನ ಇತಿಹಾಸದ ಆಧಾರದಲ್ಲಿ ಆರಾಧನೆ ನಡೆಯಲಿ. ಇಲ್ಲಿ ಈಗಾಗಲೇ ದೈವಸ್ಥಾನದ ನಿರ್ಮಾಣ ಕಾರ್ಯಗಳು ವೇಗ ಪಡೆದುಕೊಂಡು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಡೆಯುವ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ“ ಎಂದರು.
ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ., ಕಾರ್ಪೋರೇಟರ್ ಭಾಸ್ಕರ್ ಕೆ. ಮೊಯ್ಲಿ, ಹರಿಶ್ಚಂದ್ರ ಗಟ್ಟಿ, ಭಟ್ರಕೋಡಿ ವೆಂಕಟಕೃಷ್ಣ ಭಟ್, ಸೀತಾರಾಮ್ ಎ., ಆನಂದ್ ಸರಿಪಲ್ಲ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಶೇಷಾಧರ್ ಭಟ್ ದೇವರನ್ನು ಸ್ತುತಿಸಿದರು.
ಫೆ.18ರಿಂದ 22ರವರೆಗೆ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ:
ಶ್ರೀ ವಾಜಿಲ್ಲಾಯ-ಮಹಿಷಂತಾಯ-ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ
ಉತ್ಸವವು ಫೆ.18ರಿಂದ 22ರವರೆಗೆ ನಡೆಯಲಿದೆ.
ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.21ರಂದು ಬೆಳಗ್ಗೆ 8.28ಕ್ಕೆ ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ, ಮಹಿಷಂತಾಯ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಮಹಿಷಂತಾಯ ಹಾಗೂ ಶ್ರೀ ವಾಜಿಲ್ಲಾಯ ದೈವದ ನೇಮೋತ್ಸವ ನಡೆಯಲಿದೆ. ಫೆ. 22 ರಂದು ರಾತ್ರಿ 7ರಿಂದ ಧೂಮಾವತಿ ಬಂಟ ದೈವದ ನೇಮೋತ್ಸವ ಜರುಗಲಿದೆ.
ಫೆ.16ರಂದು ಬೆಳಗ್ಗೆ 10ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಕುಡುಪು ಶ್ರೀ ಆನಂತ ಪದ್ಮನಾಭ ದೇವಸ್ಥಾನದಿಂದ ಹೊರೆಕಾಣಿಕೆ ಹೊರಡಲಿದೆ. ಫೆ.18 ಮಧ್ಯಾಹ್ನ 3 ಗಂಟೆಯಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಪೆದಮಲೆ ಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿ ಸನ್ಮಾನ, ಆಲಯ ಪ್ರತಿಗ್ರಹ, ರಾಕ್ಷೋ ಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮತ್ತು ನೂತನ ಮೂಗಮೂರ್ತಿ, ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಜರುಗಲಿದೆ. ಸಂಜೆ 5:30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.19ರಂದು ಬೆಳಗ್ಗೆ 7 ಗಂಟೆಯಿಂದ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ, ತುಳಸಿ ಪ್ರತಿಷ್ಠೆ ಮತ್ತು
ದ್ವಾರಪೂಜೆ ಜರುಗಲಿದೆ.
ಬೆಳಗ್ಗೆ 8.30ಕ್ಕೆ ಶ್ರೀ ದೈವಗಳ ಚಾವಡಿಯ ಪ್ರವೇಶ ಪ್ರತಿಷ್ಠೆ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪೆದಮಲೆ
ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ ಜರುಗಲಿದೆ. ಸಂಜೆ 4 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ
ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಾಕ್ಷೋ ಘ್ನ ಹೋಮ, ವಾಸ್ತು ಹೋಮ ಮತ್ತು ವಾಸ್ತು ಬಲಿ ಜರುಗಲಿದೆ.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆರ್ಚಕ ಅನಂತ ಪದ್ಮನಾಭ ಅಸ್ರಣ್ಣ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶ್ರೀ ಶರವು
ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲಿಸಲಿದ್ದಾರೆ. ಸಂಸದ ಬೃಜೇಶ್
ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹಾಗೂ ಮತ್ತಿತರ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 7:30ಕ್ಕೆ ಪ್ರೊ. ಅಮೃತ ಸೋಮೇಶ್ವರ ವಿರಚಿತ, ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ
ಉಳ್ಳಾಲ ಮೋಹನ್ ಕುಮಾರ್ ನಿರ್ದೇಶನದ, ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಅರ್ಪಿಸುವ ಎಳುವೆರ್ ದೈಯರ್ ಕಾರ್ಯಕ್ರಮ ನಡೆಯಲಿದೆ.
ಫೆ.20ರಂದು ಬೆಳಗ್ಗೆ 8 ಗಂಟೆಯಿಂದ ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮಗಳು ಮತ್ತು ನವಗ್ರಹ ಶಾಂತಿ ಹೋಮ ಜರುಗಲಿದೆ.