
ಮುಂಬೈ: ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಏರ್ಪೋರ್ಟ್ ರನ್‌ವೇಗೆ ಎಂಟ್ರಿ ಕೊಟ್ಟು ಲ್ಯಾಂಡ್ ಆಗುವಾಗ ದಿಢೀರ್ ಸ್ಪೋಟಗೊಂಡಿದೆ. ಈ ಘಟನೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 5 ಜನರು ಮೃತಪಟ್ಟಿದ್ದಾರೆ. ಈಗ ಅಜಿತ್ ಪವಾರ್ ಸಾವಿನ ವಿಚಾರ ದೇಶದಲ್ಲಿ ಭಾರೀ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣ ಆಗಿರುವ, ಬಾರಾಮತಿ ವಿಮಾನ ನಿಲ್ದಾಣ ಘಟನೆಯ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಈಗ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಇದು ದೇಶದ ರಾಜಕೀಯ ನಾಯಕರ ಸುರಕ್ಷತೆ ಪ್ರಶ್ನಿಸುವ ಮತ್ತು ಅಕ್ರಮದ ಸಾಧ್ಯತೆ ಸೂಚಿಸುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಮಮತಾ ಬ್ಯಾನರ್ಜಿ. ಪವಾರ್ ಅವರ ಸಾವಿನ ಸುದ್ದಿಯಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ ಎಂದು ಬೇಸರ ಹೊರ ಹಾಕಿರುವ ಮಮತಾ ಬ್ಯಾನರ್ಜಿ ಈ ಘಟನೆಯನ್ನ ರಾಷ್ಟ್ರಕ್ಕೆ ಗಂಭೀರ ನಷ್ಟ ಎಂದಿದ್ದಾರೆ. ಅಲ್ಲದೇ ರಾಜಕೀಯ ನಾಯಕರಿಗೂ ಸುರಕ್ಷತೆ ಮತ್ತು ಭದ್ರತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಆರೋಪ ಕೂಡ ಮಾಡಿರುವ ಮಮತಾ ಬ್ಯಾನರ್ಜಿ, ಅಜಿತ್ ಪವಾರ್ ಬಿಜೆಪಿ ತೊರೆಯಲು ಯೋಚಿಸುತ್ತಿದ್ದಾರೆ ಎಂದು ಸೂಚಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಇತ್ತೀಚೆಗೆ ವೈರಲ್ ಆಗಿದ್ದವು ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಅಜಿತ್ ಪವಾರ್ ಸಾವಿನ ವಿಚಾರ ಕೂಡ ರಾಜಕೀಯ ರೂಪ ಪಡೆಯುತ್ತಿದೆ. ಮತ್ತೊಂದು ಕಡೆ ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ನಂಬಿಕೆ ಇದ್ದು, ಬೇರೆ ಯಾವುದೇ ಸಂಸ್ಥೆಯ ಮೇಲೆ ಅಲ್ಲ ಎಂದಿದ್ದಾರೆ ಮಮತಾ ಬ್ಯಾನರ್ಜಿ.