ಕೋಲ್ಕತ್ತಾ: ಪಶ್ಚಿಮ ಬಂಗಾಳದ ಖ್ಯಾತ ನಟಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಜಿಲ್ಲೆಯೊಂದರಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆಯೇ ತಮ್ಮನ್ನು ಅವಮಾನಿಸಲಾಗಿದ್ದು, ಬಲವಂತವಾಗಿ ಕಾರ್ಯಕ್ರಮ ನಿಲ್ಲಿಸಿ ಕೆಳಕ್ಕೆ ಇಳಿಸಲಾಯಿತು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಘಟನೆ ಪಶ್ಚಿಮ ಬಂಗಾಳದ ನಯಾಗ್ರಾಂ ಪ್ರದೇಶದ ಬೊಂಗೋನ್ ನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದ ಮಿಮಿ ಚಕ್ರವರ್ತಿ ವೇದಿಕೆ ಮೇಲೆ ಪ್ರದರ್ಶನ ನೀಡುತ್ತಿದ್ದ ವೇಳೆ, ಆಯೋಜಕರಲ್ಲಿ ಒಬ್ಬರಾದ ತನ್ಮಯ್ ಶಾಸ್ತ್ರಿ ಎಂಬವರು ವೇದಿಕೆ ಏರಿ, ಪ್ರದರ್ಶನ ನಿಲ್ಲಿಸುವಂತೆ ಕಠಿಣವಾಗಿ ಹೇಳಿ ಬಲವಂತವಾಗಿ ಕೆಳಕ್ಕೆ ಇಳಿಸಿದರು ಎಂದು ನಟಿ ಆರೋಪಿಸಿದ್ದಾರೆ. “ಸಾಕು, ನಿಲ್ಲಿಸು, ಇಲ್ಲಿಂದ ತೆರಳು” ಎಂದು ಸಾರ್ವಜನಿಕರ ಎದುರೇ ಅವಮಾನಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಆರೋಪಗಳನ್ನು ಕಾರ್ಯಕ್ರಮದ ಆಯೋಜಕರು ನಿರಾಕರಿಸಿದ್ದಾರೆ. ಪೊಲೀಸರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಆದರೆ ನಟಿ ಮಿಮಿ ಚಕ್ರವರ್ತಿ ಕಾರ್ಯಕ್ರಮಕ್ಕೆ ಸುಮಾರು ಒಂದು ಗಂಟೆ ತಡವಾಗಿ ಆಗಮಿಸಿದ್ದು, ವೇದಿಕೆ ಮೇಲೆಯೂ ಹೆಚ್ಚು ಸಮಯ ತೆಗೆದುಕೊಂಡರು. ಪೊಲೀಸರ ನಿಯಮದ ಅನ್ವಯವೇ ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಬೇಕಾಯಿತು ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ತಾವು ಯಾವುದೇ ರೀತಿಯ ದೌರ್ಜನ್ಯ ಅಥವಾ ಅವಮಾನಕರ ವರ್ತನೆ ತೋರಿಲ್ಲ ಎಂದು ಆಯೋಜಕರು ಹೇಳಿದ್ದು, ಬದಲಾಗಿ ನಟಿಯ ಬೌನ್ಸರ್‌ಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂಬ ಪ್ರತಿಯಾರೋಪವನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವು ಪರಸ್ಪರ ಆರೋಪ–ಪ್ರತ್ಯಾರೋಪಗಳ ನಡುವೆ ಸಿಲುಕಿದೆ.

ಈ ಸಂಬಂಧ ನಟಿ ಮಿಮಿ ಚಕ್ರವರ್ತಿ ಅವರು ಇಮೇಲ್ ಮೂಲಕ ಬೊಂಗೋನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ಮಿಮಿ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲೂ ತಮ್ಮ ನೋವನ್ನು ಹಂಚಿಕೊಂಡಿದ್ದು, ಅವರ ಪೋಸ್ಟ್‌ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಂಗಾಳಿ ಚಿತ್ರರಂಗದ ಪ್ರಮುಖ ನಟಿಯಾಗಿರುವ ಮಿಮಿ ಚಕ್ರವರ್ತಿ, ಟಿಎಂಸಿ ಪಕ್ಷದ ಮಾಜಿ ಸಂಸದೆ ಆಗಿಯೂ ಸೇವೆ ಸಲ್ಲಿಸಿದ್ದರು. ಅವರು ಬಂಗಾಳಿ ಸಿನಿಮಾಗಳ ಜೊತೆಗೆ ಒಂದು ಬಾಲಿವುಡ್ ಸಿನಿಮಾ ಹಾಗೂ ಒಂದು ಬಾಂಗ್ಲಾದೇಶಿ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಈ ಘಟನೆ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
