ಕುಪ್ಪೆಪದವು: ಮಂಗಳೂರು ವ್ಯಾಪ್ತಿಯ ಗಂಜಿಮಠ ಮಾರುಕಟ್ಟೆ ಸಮೀಪದಲ್ಲಿ ದೇವಸ್ಥಾನದ ಕುರುಹುಗಳು ಕಂಡು ಬಂದ ಸ್ಥಳದಲ್ಲಿ ಪ್ರಸಿದ್ಧ ಜ್ಯೋತಿಷಿ ಸಿ.ವಿ. ಪೊದುವಾಳ್ ಅವರಿಂದ ತಾಂಬೂಲ ಪ್ರಶ್ನಾಚಿಂತನೆ ನಡೆಸಲಾಗಿದೆ.
ಇದೊಂದು ಶಿವಾರಾಧಕ ಸನ್ಯಾಸಿಗಳು ಪೂಜಿಸುತ್ತಿದ್ದ ದೇವಸ್ಥಾನವಾಗಿದ್ದು, ಇಲ್ಲಿ ಶಿವ, ದೇವಿ, ಗಣಪತಿ ಇಷ್ಟ ಸಾನಿಧ್ಯಗಳಿದ್ದವು ಎನ್ನವುದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಅಲ್ಲದೆ ಈ ಸ್ಥಳ ಪೂರ್ವಕಾಲದಲ್ಲಿ ಶೈವಾರಕರಾದ ಸನ್ಯಾಸಿಗಳಿಂದ ಪೂಜಿಸಲ್ಪಡುತ್ತಿದ್ದ ಶಿವ, ದೇವಿ, ಗಣಪತಿ ಇಷ್ಟ ಸಾನಿಧ್ಯಗಳಿದ್ದವು. ಆರಾಧನೆ ಮಾಡುವ ಸ್ಥಳ ಹಾಗೂ ಹೊರಗಿನಿಂದ ನಾಗ, ರಕ್ತೇಶ್ವರಿ ಗುಳಿಗ ಸಾನಿಧ್ಯಗಳಿದ್ದು ಇದರ ಅರಾಧನೆಯೂ ನಡೆಯುತ್ತಿತ್ತು. ಮುಂದಿನ ವಿಚಾರ ವಿಮರ್ಷೆ ನಡೆಸಲು ಅಷ್ಠಮಂಗಳ ಪ್ರಶ್ನೆ ಇಡಬೇಕು ಎನ್ನುವುದು ಕಂಡುಬಂದಿದೆ.
ಬಂಟ್ವಾಳ ಶಾಸಕ, ಮೂಲತಃ ಗಂಜಿಮಠದ ಒಡ್ಡೂರು ನಿವಾಸಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಹೆಸರಲ್ಲಿ ಪ್ರಾರ್ಥನೆ ಮಾಡಿ ಸಿ.ವಿ. ಪೊದುವಾಳ್ ತಾಂಬೂಲ ಪ್ರಶ್ನಾ ಚಿಂತನೆ ನಡೆಸಿದರು.
ಸುಮಾರು 400 ವರ್ಷಗಳ ಮುಂಚೆ ಶತ್ರುಗಳಿಂದ ಹಾಗೂ ಅಗ್ನಿಯಿಂದ ಈ ದೇಗುಲ ನಾಶವಾಗಿತ್ತು. ದೇವಸ್ಥಾನದ ಹೆಸರಲ್ಲಿ ಸಮಿತಿ ರಚನೆ ಮಾಡಿ, ಕ್ಷೇತ್ರ ಇದ್ದ ಜಾಗದಲ್ಲಿ ದೇವರಿಗೆ ದೀಪ ಇಡಬೇಕು. ಮೊದಲಾಗಿ ೧೦೮ ನಾರಿಕೇಳ ಗಣಹೋಮ ಇಟ್ಟು ೪೮ ದಿನಗಳ ಕಾಲ ನಿರಂತರ ಭಜನೆ ನಡೆಸಬೇಕು. ಅಂತಿಮವಾಗಿ ರುದ್ರ ಹೋಮ ನಡೆಸಿ ದೇವಸ್ಥಾನಕ್ಕಾಗಿ ಅಷ್ಠಮಂಗಳ ಪ್ರಶ್ನೆ ನಡೆಸಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ನಡೆಸಬೇಕು ಎಂದು ಸಿ.ವಿ. ಪೊದುವಾಳರ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ.
ದೋಷ ಪರಿಹಾರಾರ್ಥವಾಗಿ ದೇಗುಲಕ್ಕೆ ಸಂಬಂಧಪಟ್ಟ ಕ್ಷೇತ್ರಗಳಿಗೆ ಪೂಜೆ ಹಾಗೂ ಇನ್ನಿತರ ಪರಿಹಾರಗಳನ್ನು ಸೂಚಿಸಿದರು.
ಮಾರ್ಚ್ 14ರಿಂದ ಗಣಹೋಮ ನಡೆದು ಮುಂದಿನ 48 ದಿನಗಳವರೆಗೆ ನಿರಂತರ ಭಜನೆ ನಡೆದು ಮುಂದಿನ ಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದೊಂದು ಭೋಜನ ಪೂಜೆ ನಡೆಯುತ್ತಿದ್ದ ಎರಡು ಸಾನಿಧ್ಯಗಳಿದ್ದ ಅತ್ಯಂತ ಪುರಾತನ ಆರಾಧನಾ ಕೇಂದ್ರಗಳಾಗಿದೆ. ಈ ಸಾನಿಧ್ಯದಲ್ಲಿ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯವಿದ್ದು, ನರ್ತನ ಸೇವೆ ನಡೆಯುತ್ತಿತ್ತು ಎನ್ನುವುದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಸಾರಾಂಶ.
ಮಠಕ್ಕೆ ಸಂಬಂಧಿಸಿದ ದೇಗುಲ:
ಗಂಜಿಮಠ ಮಠಕ್ಕೆ ಸಂಬಂಧಿಸುದ ಸಾನಿಧ್ಯವಾಗಿದ್ದು, ಸುಮಾರು ೪೦೦ ವರ್ಷಗಳ ಮುಂಚೆ ಪರಕೀಯರು ದಾಳಿ ನಡೆಸಿ ಬೆಂಕಿಯಿಂದ ನಾಶಪಡಿಸಿ ಇಲ್ಲಿನ ಸಂಪತ್ತನ್ನು ದೋಚಿದ್ದಾರೆ. ದೇಗುಲಕ್ಕೆ ಸಂಬಧಿಸಿದ ವಸ್ತುಗಳನ್ನು ಇಲ್ಲಿರುವ ಕೆರೆಗೆ ಹಾಕಿರುವ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ.
ಗಂಜಿಮಠದಲ್ಲಿ ಗಂಜಿಯೇ ಪ್ರಸಾದವಾಗಿತ್ತು!
ಗಂಜಿಮಠ ದೇವಸ್ಥಾನ ಅತ್ಯಂತ ಪ್ರಸಿದ್ಧ ದೇಗುಲವಾಗಿ ಗುರುತಿಸಲ್ಪಟ್ಟಿದ್ದು, ನೈವೇದ್ಯವಾಗಿ ಭಕ್ತರಿಗೆ ಗಂಜಿ ನೀಡಲಾಗುತ್ತಿತ್ತು. ಗಂಜಿ ದೇವಿಗೆ ಸಂಬಂಧಿಸಿದ ಪ್ರಸಾದವಾಗಿದೆ. ಮಠದವರಿಗೆ ಸಂಬಂಧಪಟ್ಟಿರುವುದರಿಂದ ಮಹಮ್ಮಾಯಿ ದೇವಿಯ ಆರಾಧನೆಯೂ ಆಗಿರಬಹುದು. ಅಥವಾ ಚೌಡೇಶ್ವರಿ ಅಥವಾ ವಿರಕ್ತ ಪರಂಪರೆಯ ಕೊಟ್ಟೂರಮ್ಮ ದೇವಿಯೂ ಆಗಿರುವ ಸಾಧ್ಯತೆ ಇದೆ. ಮೂಲತಃ ಇಲ್ಲಿ ಯಾವ ದೇವಿಯ ಆರಾಧನೆ ನಡೆಯುತ್ತಿತ್ತು ಎನ್ನುವುದನ್ನು ಅಷ್ಠಮಂಗಲ ಪ್ರಶ್ನೆಯಲ್ಲಿಯೇ ಕಂಡುಕೊಳ್ಳಬೇಕಾಗಿದೆ ಎಂದು ಚಿಂತನೆ ನಡೆಸಿ ಪದೊವಾಳರು ದೋಷಪರಿಹಾರ ಕ್ರಮಗಳ ಬಗ್ಗೆ ಸೂಚಿಸಿದರು.
ಕೆರೆ, ತೀರ್ಥಬಾವಿ
ಗಂಜಿಮಠದಲ್ಲಿ ಕೆರೆ ಹಾಗೂ ಪಾಳುಬಿದ್ದ ಬಾವಿ ಇದೆ. ಸ್ಥಳೀಯರು ಬಾವಿಯನ್ನು ಸ್ವಚ್ಚಗೊಳಿಸಿದ್ದು, ಎಳನೀರಷ್ಟು ಶುದ್ಧವಾದ ನೀರಿದೆ. ಇದೇ ಜಾಗದಲ್ಲಿ ಶಿವನ ದೇಗುಲವಿದ್ದ ಸಾಧ್ಯತೆ ಇದ್ದು ಪೊದೆಗಳಿಂದ ಮುಚ್ಚಿಹೋಗಿರುವ ಸಾಧ್ಯತೆ ಇದೆ. ದೇವಸ್ಥಾನದ ಜಾಗ ಬೇರೆಯವರ ಹೆಸರಲ್ಲಿದ್ದು ಬಹುತೇಕ ಮಂದಿ ಭೂಮಿಯನ್ನು ದೇವರಿಗೊಪ್ಪಿಸಲು ಒಪ್ಪಿದ್ದಾರೆ. ಇಲ್ಲಿ ದೇಗುಲ ನಿರ್ಮಾಣವಾದರೆ ದೋಷ ಪರಿಹಾರವಾಗಿ ಸುಭೀಕ್ಷೆ ನೆಲೆಸಲಿದೆ. ಎಲ್ಲಾ ಭಕ್ತರು ಒಮ್ಮತದಿಂದ ಒಟ್ಟುಗೂಡ ಸೇವೆ ಮಾಡಬೇಕು. ತಾಂಬೂಲ ಪ್ರಶ್ನೆಯಲ್ಲಿ ಶುಭಲಗ್ನ ಕಂಡುಬಂದಿರುವುದರಿಂದ ಶೀಘ್ರ ದೇಗುಲ ನಿರ್ಮಾಣವಾಗಬಹುದು ಎಂದು ಪೊದುವಾಳರು ತಿಳಿಸಿದರು.
ಗುರುಪುರ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಸಲಹೆ ಸೂಚನೆ ನೀಡಿದರು. ಶಾಸಕ ಡಾ. ವೈ ಭರತ್ ಶೆಟ್ಟಿ, ಊರ ಗಣ್ಯರು, ಭಕ್ತರು ಇದ್ದರು.