ಜ.20: ಕಾಟಿಪಳ್ಳ ಜಾರಂದಾಯ ಕೇಶವ ಶಿಶುಮಂದಿರದ ನೂತನ ಕಟ್ಟಡ ಲೋಕಾರ್ಪಣೆ

ಮಂಗಳೂರು: “ಅಭ್ಯುದಯ ಭಾರತಿ ಸೇವಾ ಟ್ರಸ್ಟ್ 2003ನೇ ಇಸವಿಯಲ್ಲಿ ಪರಮಪೂಜ್ಯ ಪೇಜಾವರ ಹಿರಿಯ ಸ್ವಾಮೀಜಿಯವರ ದಿವ್ಯ ಹಸ್ತದಿಂದ
ಉದ್ಘಾಟನೆಗೊಂಡಿತು. ನಮ್ಮ ಸಂಸ್ಥೆ ಕಳೆದ 22 ವರ್ಷದಿಂದ ಕಾಟಿಪಳ್ಳ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದರೆ ಕಾಟಿಪಳ್ಳದ ಎಲ್ಲಾ ಬ್ಲಾಕ್‌ಗಳು, ಸೂರಿಂಜೆ, ಚೇಳಾಯರು, ಮಧ್ಯ ಕುಲ್ಲಂಗಾಲು, ಶಿಬರೂರು ದೇಲಂತಬೆಟ್ಟು, ಕುತ್ತೆತ್ತೂರು, ಬಾಳ ಗ್ರಾಮದಲ್ಲಿ ಶೈಕ್ಷಣಿಕ ಸಾಮಾಜಿಕ,
ಆರೋಗ್ಯ, ಸಂಸ್ಕಾರ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಜಾಗೃತಿಯನ್ನು ಮಾಡುವ ಮೂಲಕ ಹಿಂದು ಸಮಾಜದ ಸೇವೆಯನ್ನು
ಮಾಡುತ್ತಾ ಬಂದಿರುತ್ತೇವೆ. ಕಾಟಿಪಳ್ಳದಲ್ಲಿ ನಡೆಯುವ ವೈಭವದ ಮೊಸರು ಕುಡಿಕೆ ಉತ್ಸವ ನಮ್ಮ ಸಂಸ್ಥೆಯ ಮಹಿಳೆಯರು ಆರಂಭ ಮಾಡಿರುವ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಾ ಬಂದಿರುತ್ತೇವೆ. ನಮ್ಮ ಸಂಸ್ಥೆಯ ಪ್ರಮುಖ ಸೇವಾ ಚಟುವಟಿಕೆಯಾದ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ ಮೂಲಕ 2.5 ವರ್ಷದಿಂದ 5 ವರ್ಷದ ಮಕ್ಕಳಿಗೆ ಹಿಂದು ಸಂಸ್ಕೃತಿ ಸಂಸ್ಕಾರಗಳಿಗೆ ಪೂರಕವಾದ ಜೀವನ ಮೌಲ್ಯ ಮತ್ತು ನೈತಿಕತೆಯನ್ನು ಒದಗಿಸುವಂತಹ ಶಿಕ್ಷಣವನ್ನು ತರಬೇತಿ ಪಡೆದ
ನುರಿತ ಶಿಕ್ಷಕಿಯರಿಂದ ಕಳೆದ 22ವರ್ಷಗಳಿಂದ ನಡೆಸುತ್ತಾ ಬಂದಿರುತ್ತದೆ. ಇದೀಗ ಸುಮಾರು 60 ಮಕ್ಕಳು ಶಿಶುಮಂದಿರದಲ್ಲಿ ಶಿಕ್ಷಣ
ಪಡೆಯುತ್ತಿರುವುದರಿಂದ ಸ್ಥಳಾವಕಾಶದ ಕೊರತೆಯನ್ನು ಮನಗಂಡು ಎಮ್.ಆರ್.ಪಿ.ಎಲ್.ನ ಸಿ.ಎಸ್.ಆ‌ರ್ ಅನುದಾನದ ಅಡಿಯಲ್ಲಿ
ರೂ. 40 ಲಕ್ಷ ವೆಚ್ಚದಲ್ಲಿ ಶಿಶುಮಂದಿರ ನಿರ್ಮಾಣ ಮಾಡಿರುತ್ತೇವೆ. ಶಿಶುಮಂದಿರಕ್ಕೆ ಪೂರವಾದ ಚಟುವಟಿಕೆ ನಡೆಸಲು ಮತ್ತು
ಟ್ರಸ್ಟ್‌ನ ಸಾಮಾಜಿಕ ಕಾರ್ಯಕ್ಕೆ ಪೂರಕವಾಗಿ ಶಿಶುಮಂದಿರದ ಮೇಲೆ ಎರಡು ಸಭಾಂಗಣವನ್ನು ಸಮಾಜದ ಬಂಧುಗಳ ಸಹಕಾರದಿಂದ
ಸುಮಾರು 90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೂತನ ಕಟ್ಟಡದ ಒಟ್ಟು ವೆಚ್ಚ ರೂ. 1.3 ಕೋಟಿ ಆಗಿರುತ್ತದೆ.
ಅಭ್ಯುದಯ ಭಾರತಿ ಸೇವಾ ಟ್ರಸ್ಟ್, ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಿರ್ಮಾಣಗೊಂಡಿರುವ, ಶ್ರೀ ಜಾರಂದಾಯ ಕೇಶವ ಶಿಶು ಮಂದಿರದ ನೂತನ ಕಟ್ಟಡ ಸಾರ್ಥಕ್ಯ ಇದರ ಪ್ರವೇಶೋತ್ಸವವು ಜ.20ರ ಸೋಮವಾರ ಬೆಳಿಗ್ಗೆ 8.30ಕ್ಕೆ
ನಡೆಯಲಿದೆ ಎಂದು ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಇದರ ಅಧ್ಯಕ್ಷರಾದ ಜಯಪ್ರಕಾಶ್ ಸೂರಿಂಜೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪೇಜಾವರ ಮಠಾಧೀಶ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ,
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಪ್ರವೇಶೋತ್ಸವ ನಡೆಯಲಿದೆ. ಇದರ ಅಂಗವಾಗಿ ಜ.19ರಂದು ಸಂಜೆ 6ಗಂಟೆಗೆ ಸಾಮೂಹಿಕ ಪ್ರಾರ್ಥನೆ, ವಾಸ್ತುಪೂಜೆ, ವಾಸ್ತುಬಲಿ ನಡೆಯಲಿದೆ. ಜ.20ರಂದು
ಬೆಳಿಗ್ಗೆ 8.30ಕ್ಕೆ ಕುಂಭ ಲಗ್ನ ಸಮುಹೂರ್ತದಲ್ಲಿ ಸಾರ್ಥಕ್ಯದ ಪ್ರವೇಶೋತ್ಸವ ಜರಗಲಿದೆ. 9.30ಕ್ಕೆ ಪಕ್ಷಿಕೆರೆಯ ದಾಸ ಪ್ರಿಯಾ
ಬಳಗದಿಂದ ಭಜನೆ ನಡೆಯಲಿದೆ. ಗಣೇಶಪುರದ ತಣ್ಣೀರುಬಾವಿ ಶ್ರೀ ಜಾರಂದಾಯ ದೈವಸ್ಥಾನದ ಆನುವಂಶಿಕ ಮೊತ್ತೇಸರರಾದ ಸದಾನಂದ ರಾವ್ ಅವರು ದೀಪಪ್ರಜ್ವಲನೆಗೈಯಲಿದ್ದಾರೆ. ಪೂರ್ವಾಹ್ನ 11.30ಕ್ಕೆ ಧಾರ್ಮಿಕ ಸಭೆಯೊಂದಿಗೆ ನೂತನ ಕಟ್ಟಡ
ಲೋಕಾರ್ಪಣೆಯಾಗಲಿದೆ. ಅನಂತರ ಅನ್ನಸಂತರ್ಪಣೆ ಮತ್ತು ಸಂಜೆ 4.30ಕ್ಕೆ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ
ವಾರ್ಷಿಕೋತ್ಸವವೂ ನಡೆಯಲಿದೆ ಎಂದು ಹೇಳಿದರು.
ಸಂಘಟನೆ ವತಿಯಿಂದ ಪ್ರತಿವರ್ಷ ಬೃಹತ್‌ ರಕ್ತದಾನ ಶಿಬಿರ, ವನಮಹೋತ್ಸವ,
ಭಜನಾ ತರಬೇತಿ ಮತ್ತು ನಮ್ಮ ಕ್ಷೇತ್ರ ವ್ಯಾಪ್ತಿಯ 16 ಸ್ಥಾನಗಳಲ್ಲಿ ಬಾಲಗೋಕುಲಗಳನ್ನು ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸುತ್ತಾ ಬಂದಿರುತ್ತೇವೆ. ಹೀಗೆ ಹತ್ತು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ನಿರಂತರವಾಗಿ
ಮಾಡುವುದರ ಮೂಲಕ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ಶ್ರೀ ಜಾರಂದಾಯ ಶಿಶುಮಂದಿರವು ಕಾಟಿಪಳ್ಳದ ತಣ್ಣೀರುಬಾವಿ ಶ್ರೀ ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ ಒದಗಿಸಿದ ಜಾಗದಲ್ಲಿ ಸಣ್ಣ ಕಟ್ಟಡವನ್ನು ನಿರ್ಮಿಸಿ ಕಳೆದl8 ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತೇವೆ. ಈ ಶಿಶುಮಂದಿರ ಪ್ರಯೋಜನವನ್ನು ಸಾವಿರಾರು ಮಕ್ಕಳು ಪ್ರಯೋಜನ ಪಡೆದಿರುವುದು ಮತ್ತು ಇದಕ್ಕೆ ಪೂರಕವಾದ ಚಟುವಟಿಕೆಗಳ ಮುಖಾಂತರ ಸಾಮಾಜಿಕ, ಪರಿವರ್ತನೆ ಆಗಿರುವುದು ಉಲ್ಲೇಖನೀಯ ಅಂಶವಾಗಿದೆ. ಕಾಟಿಪಳ್ಳ ಕ್ಷೇತ್ರದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿಗಳ ಸೇವಾ ಚಟುವಟಿಕೆಗಳಿಗೆ ಸಾರ್ಥಕ್ಯ ತರುವ ರೀತಿಯಲ್ಲಿ ಶ್ರೀ ಜಾರಂದಾಯ ಕೇಶವ ಶಿಶುಮಂದಿರ “ಸಾರ್ಥಕ್ಯ”
ರೂಪುಗೊಂಡಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಯಕುಮಾರ್ ಪಿ ಆರ್, ಮನೋಹರ್ ಶೆಟ್ಟಿ ಸೂರಿಂಜೆ, ಲೋಕೇಶ್ ಬೊಳ್ಳಾಜೆ, ವಸಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!