ಬೆಂಗಳೂರು: ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಅವರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲೇ ಈ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಆರೋಪದ ಪ್ರಕಾರ, ಸೋಮಶೇಖರ್ ಅವರ ಅತ್ತಿಗೆಯ ತಂದೆಯೇ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಟಿ ಕಾವ್ಯ ಗೌಡ ಅವರ ಜನಪ್ರಿಯತೆಯನ್ನು ಸಹಿಸದೇ ಈ ಕೃತ್ಯ ನಡೆಸಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೆ, ಕಾವ್ಯ ಗೌಡ ಅವರಿಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಕಾವ್ಯ ಗೌಡ ಅವರ ಪತಿ ಸೋಮಶೇಖರ್ ಅವರಿಗೆ ಚಾಕುವಿನಿಂದ ಇರಿದು ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು, ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ನಟಿ ಕಾವ್ಯ ಗೌಡ ಹಾಗೂ ಅವರ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಗೌಡ ಅವರ ಅಕ್ಕ ಭವ್ಯ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ರವಿಕುಮಾರ್ ಎಂಬ ವ್ಯಕ್ತಿಯಿಂದ ಅತ್ಯಾಚಾರ ಬೆದರಿಕೆ ಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ನಟಿ ಕಾವ್ಯ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರೇಮ, ನಂದಿಶ್, ಪ್ರಿಯಾ ಹಾಗೂ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಯ ಹಿನ್ನೆಲೆ, ಹಲ್ಲೆಗೆ ಕಾರಣ ಹಾಗೂ ಆರೋಪಿಗಳ ಪಾತ್ರದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
