“ಸರಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಬೇಕು” -ಇನಾಯತ್ ಅಲಿ

ಕುಂಜತ್ತಬೈಲ್ ನಲ್ಲಿ ಇಂದಿರಾ ಸೇವಾ ಕೇಂದ್ರ ಲೋಕಾರ್ಪಣೆ

ಸುರತ್ಕಲ್: “ನಾವು ಚುನಾವಣೆ ಪೂರ್ವದಲ್ಲಿ ಮನೆ ಮನೆಗೆ ಭೇಟಿ ಕೊಟ್ಟು ಗ್ಯಾರಂಟಿ ಕಾರ್ಡ್ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾಗ ಬಿಜೆಪಿಯವರು ಇದು ಜಾರಿಗೆ ತರಲು ಸಾಧ್ಯವೇ ಇಲ್ಲ. ಇದಕ್ಕೆ ಅಷ್ಟು ಸಾವಿರ ಕೋಟಿ ಬೇಕು ಇಷ್ಟು ಸಾವಿರ ಕೋಟಿ ಬೇಕು ಎಂದೆಲ್ಲ ಅಪಪ್ರಚಾರ ಮಾಡಿದರು. ಆದರೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರು ಹೇಳಿದಂತೆಯೇ ಈಗಾಗಲೇ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಅಡ್ಡಗಾಲು ಹಾಕುತ್ತಿದೆ. ಇದು ಖಂಡನೀಯ. ಕಾಂಗ್ರೆಸ್ ಸರಕಾರ ಜಾರಿಗೆ ತರಲಿರುವ ಬಡವರಪರ ಇರುವ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಬೇಕು. ಇಂತಹ ಸೇವಾ ಕೇಂದ್ರಗಳ ಮೂಲಕ ಜನರ ಕೆಲಸ ನಿರಂತರವಾಗಿ ನಡೆಯಲಿ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಹೇಳಿದರು. ಅವರು ಕುಂಜತ್ತಬೈಲ್ ನಲ್ಲಿ ಇಂದಿರಾ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.


ಬಳಿಕ ಮಾತಾಡಿದ ಕೆ. ಮುಹಮ್ಮದ್ ಅವರು, “ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅತೀ ಅವಶ್ಯವಾಗಿದೆ. ಜಾತಿ ಮತ, ಮೇಲು ಕೀಳು ಎಂಬ ಬೇಧಭಾವವಿಲ್ಲದೆ ಎಲ್ಲರೂ ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.


ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ ಅವರು, “ಪಕ್ಷಕ್ಕಾಗಿ ಪ್ರತಿಯೊಬ್ಬರೂ ದುಡಿಯಬೇಕು. ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಸರಕಾರ ಆಡಳಿತದಲ್ಲಿ ಇರುವಾಗ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನಾಯತ್ ಅಲಿ ಚುನಾವಣೆಯಲ್ಲಿ ಸೋತರೆಂದು ಕ್ಷೇತ್ರವನ್ನು ಬಿಟ್ಟು ಹೋಗಿಲ್ಲ. ವಾರದಲ್ಲಿ ಹೆಚ್ಚಿನ ದಿನಗಳನ್ನು ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಕಳೆಯುತ್ತಿದ್ದಾರೆ. ಇಂತಹ ನಾಯಕರು ಇತರರಿಗೆ ಮಾದರಿ” ಎಂದರು.
ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುರತ್ಕಲ್ ಬ್ಲಾಕ್ ನಿಕಟಪೂರ್ವ ಅಧ್ಯಕ್ಷ ಉಮೇಶ್ ದಂಡೆಕೇರಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಮನಪಾ ಮಾಜಿ ಮೇಯರ್ ಹರಿನಾಥ್, ಮನಪಾ ಮಾಜಿ ಉಪಮೇಯರ್ ಕೆ. ಮುಹಮ್ಮದ್, ಮನಪಾ ಸದಸ್ಯ ಅನಿಲ್ ಕುಮಾರ್, ರೆಹಮಾನ್ ಕುಂಜತ್ತಬೈಲ್, ಶ್ರೀನಿವಾಸ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!