ಹುಡುಗಿಯ ರಕ್ಷಣೆಯ ಸಂದರ್ಭ ಚೂರಿ ಇರಿತಕ್ಕೊಳಗಾದ ಭವಿತ್ ಭೇಟಿ ಮಾಡಿದ ಶಾಸಕ ಡಾ.ಭರತ್ ಶೆಟ್ಟಿ ವೈ.

ಮಂಗಳೂರು: ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದ ಅನ್ಯಕೋಮಿನ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಭವಿತ್ ಎಂಬ ಯುವಕನಿಗೆ ಚೂರಿಯಿಂದ ಇರಿದ ಘಟನೆ ಕೆಲದಿನಗಳ ಹಿಂದೆ ನಡೆದಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ. ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಶಾಸಕರಿಗೆ ಮಾಹಿತಿ ನೀಡಿದ ಭವಿತ್ ಹಿಂದೂ ಯುವತಿಯೊಬ್ಬಳು ತಣ್ಣೀರುಬಾವಿ ಬಳಿ ಮನೆಗೆ ಹೋಗುತ್ತಿದ್ದ ಸಂದರ್ಭ ಆರೋಪಿ ಸಾದಿಕ್ ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದಿದ್ದು ಆಕೆ ಭಯಗೊಂಡು ಧನುಷ್ ಎಂಬಾತನ ಮನೆಗೆ ಹೋಗಿ ನನಗೆ ಫೋನ್ ಮಾಡಿ ತಿಳಿಸಿದ್ದಾರೆ.
ತಾನು ಸಾದಿಕ್ ನನ್ನು ಪ್ರಶ್ನಿಸಿದಾಗ ಸಾದಿಕ್ ಕೆಟ್ಟದಾಗಿ ಬೈದು ಕೊಲ್ಲುವ ಉದ್ದೇಶದಿಂದ ಚೂರಿ ಇರಿದಿದ್ದಾನೆ ಎಂದು ಮಾಹಿತಿ ನೀಡಿದರು. ಚೂರಿ ಇರಿದ ಆರೋಪಿ ತಣ್ಣೀರುಬಾವಿ ನಿವಾಸಿ ಸಾದಿಕ್ ಎಂಬಾತನಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಣಂಬೂರು ವಿಭಾಗದ ಎಸಿಪಿ ಅವರಿಗೆ ಸೂಚಿಸಿದ್ದೇನೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದರು. ಇಂತಹ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು.ಇದನ್ನೇ ಕೋಮು ಗಲಭೆಗೆ ಬಳಸಿ ಹಿಂದೂ ಸಂಘಟನೆಯ ಯುವಕರ ಮೇಲೆ ಗೂಬೆ ಕೂರಿಸುವ ಸಂಚು ಈ ಕಾಂಗ್ರೆಸ್ ಸರಕಾರದಲ್ಲಿ ನಡೆಯುವ ಶಂಕೆಯೂ ನನಗಿದೆ. ಹಿಂದೂ ಯುವತಿಯರ ರಕ್ಷಣೆಗೆ ಹಿಂದೂ ಸಮಾಜ ಶಕ್ತವಾಗಿದೆ. ದೂರದ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಆಗುವ ಇಂತಹ ಘಟನೆ ಇಲ್ಲಿ ನಡೆಯಲು ಆರಂಭವಾಗಿರುವುದು ಆತಂಕಕಾರಿ.
ಇಂತಹ ಸೂಕ್ಷ್ಮ ವಿಚಾರವನ್ನು ನೈತಿಕ ಪೊಲೀಸ್ ಗಿರಿ ಎಂದು ಬಣ್ಣ ಹಚ್ಚಲು ಅವಕಾಶ ಕೊಡದೆ ಪೊಲೀಸರು ತಕ್ಷಣ ಬಗೆಹರಿಸಲು ಕ್ರಮ ಜರಗಿಸಬೇಕು. ಹೊಸ ಹೋರಾಟ ,ಪ್ರತಿಭಟನೆಗೆ ಅವಕಾಶ ನೀಡಬೇಡಿ ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ತೀವ್ರ ನಿಗಾವಹಿಸಬೇಕು ಎಂದು ಎಚ್ಚರಿಸಿದರು.
ಮನಪಾ ಸದಸ್ಯರಾದ ಸುನಿತಾ ಯುವಮೋರ್ಚಾ ಪ್ರಮುಖರಾದ ಭರತ್ ರಾಜ್, ಸಂಜಿತ್ ಶೆಟ್ಟಿ, ರಾಹುಲ್, ಹರಿಪ್ರಸಾದ್ ಶೆಟ್ಟಿ, ದಿವೇಶ್, ತಿಲಕ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!