ಸುರತ್ಕಲ್: ಇಲ್ಲಿನ ಎನ್ ಐ ಟಿಕೆ ಬಳಿಯಿರುವ ಅಕ್ರಮ ಟೋಲ್ ಗೇಟನ್ನು ಅಕ್ಟೊಬರ್ 18ರಂದು ಒಡೆದೇ ಸಿದ್ಧ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಮುಖಂಡರು ಘೋಷಣೆ ಮಾಡಿದ್ದು ಇನ್ನೇನು ಎರಡು ದಿನಗಳು ಬಾಕಿ ಇರುವಂತೆಯೇ ಹೋರಾಟಗಾರರ ಮನೆಗಳಿಗೆ ಮಧ್ಯರಾತ್ರಿ ಪೊಲೀಸರು ನುಗ್ಗಿ ನೋಟೀಸ್ ನೀಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಟೋಲ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ನಾಯಕಿ ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ ಅವರ ಕುಳಾಯಿಯಲ್ಲಿರುವ ನಿವಾಸಕ್ಕೆ ಮಧ್ಯರಾತ್ರಿ ಹೋದ ಪೊಲೀಸರು ಅ.18ರಂದು ಗಲಾಟೆ ಮಾಡುವುದಿಲ್ಲ ಎಂಬುದಾಗಿ 2 ಲಕ್ಷ ರೂ. ಬಾಂಡ್ ಬರೆದುಕೊಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಪ್ರತಿಭಾ ಅವರು ಬೇರೆಡೆ ಇದ್ದು ಮನೆಯಲ್ಲಿದ್ದ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾದ ಮಾಹಿತಿ ಲಭಿಸಿದೆ. ಟೋಲ್ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರಕಾರ, ಸಂಸದರು ಪೊಲೀಸ್ ಬಲವನ್ನು ಬಳಸಿಕೊಂಡು ಮಧ್ಯರಾತ್ರಿ ಅದೂ ಮಹಿಳಾ ಹೋರಾಟಗಾರ್ತಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವುದು ಬಿಜೆಪಿ ಸರಕಾರದ ನೈತಿಕ ಅಧಪತನದ ಸಂಕೇತವಾಗಿದೆ ಎಂದು ಪ್ರತಿಭಾ ಕುಳಾಯಿ ಕಿಡಿಕಾರಿದ್ದಾರೆ.