ಬೆಳ್ತಂಗಡಿ: ನಿನ್ನೆ ತಡರಾತ್ರಿ ಮಂಗಳೂರಿನಲ್ಲಿ ಮೀಟಿಂಗ್ ಮುಗಿಸಿ ಬೆಳ್ತಂಗಡಿಗೆ ವಾಪಾಸ್ ಆಗುತ್ತಿದ್ದ ಶಾಸಕ ಹರೀಶ್ ಪೂಂಜಾ ಕಾರ್ ತಡೆದ ದುಷ್ಕರ್ಮಿಗಳ ಗುಂಪು ತಲವಾರ್ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ತಡರಾತ್ರಿ 11.30ರ ವೇಳೆಗೆ ಘಟನೆ ನಡೆದಿದ್ದು ಹರೀಶ್ ಪೂಂಜಾ ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪಡೀಲ್ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳು ಕಾರನ್ನು ಬೆನ್ನಟ್ಟಿದ್ದಾರೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರು ಝಳಪಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಶಾಸಕ ಪೂಂಜಾ ಕಾರು ಚಾಲಕ ನವೀನ್ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.