ಸುರತ್ಕಲ್: ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಸುರತ್ಕಲ್ ಕಾರ್ಪೋರೇಟರ್ ಒಬ್ಬರ ಕಾರ್ಯವೈಖರಿ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದ್ದು ಅದಕ್ಕೆ ನೆಟ್ಟಿಗರು ಬಹುಪರಾಕ್ ಅನ್ನುತ್ತಿದ್ದಾರೆ. ನಸುಕಿನ 4 ಗಂಟೆಯ ಸುಮಾರಿಗೆ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿನ ಗುಂಡಿಗಳನ್ನು ತಾವೇ ನಿಂತು ಮುಚ್ಚಿಸುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಜನರ ಮತ ಪಡೆದು ಗೆಲ್ಲುವ ಜನನಾಯಕರು ಹೀಗಿರಬೇಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಸಂಜಯ ಗೌಡ ಕೊಟ್ಟಿಗೆಹಾರ ಎಂಬವರು ಪೋಸ್ಟ್ ಮಾಡಿದ್ದು, ಅದರಲ್ಲಿ “ಇಂದು ಬೆಳಗ್ಗೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಂದ ದಸರಕ್ಕೆ ಆಗಮಿಸಿರುವ ಬಂಧುವೋರ್ವರನ್ನು ಕರೆತರಲು ಹೋದಾಗ ಸುರತ್ಕಲ್ ಜಂಕ್ಷನ್ ಬಳಿ ಕಂಡು ಬಂದ ಚಿತ್ರ. ಮಧ್ಯವಯಸ್ಸಿನ ಮಹಿಳೆ ಸರ್ಕಾರಿ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡುವಂತೆ ಕಂಡುಬಂತು. ಇಳಿದು ವಿಚಾರಿಸಬೇಕು ಎಂದು ಅನಿಸಿತು. ಯಾಕೆ ತಾಯಿ ಬೆಳಗ್ಗಿನ ಜಾವ 4:00ಕ್ಕೆ ಒಬ್ಬಳೇ ನಿಂತಿರುವೆ, ನಿಮ್ಮ ಕಂಪನಿಯಲ್ಲಿ ಪುರುಷ ಸೂಪರ್ವೈಸರ್ ಇಲ್ಲವೇ ಎಂದು ಕೇಳಿದೆ. ಆಗ ಆಕೆ ಇಲ್ಲ ನಾನು ಇಲ್ಲಿಯ ಕಾರ್ಪೊರೇಟರ್ ನಯನಾ ಕೋಟ್ಯಾನ್ ಅಂದರು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹಬ್ಬದ ನಿಮಿತ್ತ ತುಂಬಾ ಓಡಾಟ ಇರುತ್ತೆ, ಹೊರಗಡೆ ಇದ್ದವರು ರಜೆಯಲ್ಲಿ ಊರಿಗೆ ಬರುವ ಸಮಯ, ಇದನ್ನು ನೋಡಿ ಬೈಯುತ್ತಾರೆ, ಸಾಮಾಜಿಕ ಜಾಲ ತಾಣದಲ್ಲಿ ವ್ಯಂಗ್ಯ ಮಾಡುತ್ತಾರೆ, ನನ್ನ ಮತ್ತು ಪಕ್ಷದ ಬಗ್ಗೆ ತಪ್ಪು ಭಾವನೆ ಉಂಟಾಗುತ್ತದೆ, ಮೇಲೆ ಕೆಳಗೆ ಎಲ್ಲಾ ಆಡಳಿತ ನಮ್ಮದೆ ಇದೆ ನೋಡಿ ಅದಕ್ಕೆ ಆದಷ್ಟು ಕಾಂಕ್ರೀಟ್ ಹಾಕಿ ರಸ್ತೆಗುಂಡಿ ಮುಚ್ಚಿಸುವುದು ಎಂದರು. ಕೆಲಸಗಾರರನ್ನು ಬಿಟ್ಟು ಹೋದರೆ ಅರ್ಧಂಬರ್ಧ ಮಾಡುತ್ತಾರೆ, ನಂತರ ಜನರು ಬೈಯುತ್ತಾರೆ, ಈ ಹಿಂದೆ ಮೂರು ಮೂರು ಬಾರಿ ರಿಪೇರಿ ಮಾಡಿದರೂ ಎದ್ದು ಹೋಗಿದೆ, ಪುಣ್ಯಕ್ಕೆ ಇವತ್ತು ಮಳೆ ಬಂದಿಲ್ಲ’ ಎಂದರು
ಇನ್ನೂ ಆಶ್ಚರ್ಯ ಅಂದರೆ ಇದು ರಾಷ್ಟೀಯ ಹೆದ್ದಾರಿಯವರ ಕೆಲಸ ಅಂತೆ, ಅವರು ಎಷ್ಟು ಹೇಳಿದರೂ ಮಾಡುವುದಿಲ್ಲ, ಈಗಾಗಿ ಇಲ್ಲಿಯೇ ಸಮೀಪ ನನ್ನ ವಾರ್ಡ್ ನಲ್ಲಿಯೇ ಒಳರಸ್ತೆಯ ಕೆಲಸ ಆಗುತ್ತಿದೆ, ಅಲ್ಲಿ ಮುಗಿಸಿಕೊಂಡು ಉಳಿದ ಕಾಂಕ್ರಿಟನ್ನು ಕಾಂಟ್ರಾಕ್ಟರ್ ನಲ್ಲಿ ವಿನಂತಿ ಮಾಡಿ ಇಲ್ಲಿ ತಂದು ಹಾಕಿಸುತ್ತಿರುವೆ” ಎಂದು ಬರೆದಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಓರ್ವ ಮಹಿಳಾ ಕಾರ್ಪೋರೇಟರ್ ಕಾರ್ಯ ಜನಮೆಚ್ಚುಗೆ ಪಡೆದಿದೆ.