📝ಶಶಿ ಬೆಳ್ಳಾಯರು
ಕಾಡಿನ ಮಧ್ಯೆ ಬದುಕುವ ಮೂಲನಿವಾಸಿಗಳು, ಅವರ ಆರಾಧ್ಯ ದೈವ ಪಂಜುರ್ಲಿ, ಗುತ್ತಿನ ಮನೆ, ಕಾಡಿನ ಜನಗಳು ಎಲ್ಲೋ ಅನ್ಯಗ್ರಹದವರು ಕಾಡೇ ಸರಕಾರದ್ದು ಅನ್ನೋ ಅರಣ್ಯ ಇಲಾಖೆಯ ಹುಂಬತನ, ಅರಣ್ಯ ಕಾಯ್ದೆಯ ಅರಿವಿಲ್ಲದೆ ಕಾಡು ಉತ್ಪತ್ತಿಯನ್ನೇ ಅವಲಂಬಿಸಿ ದೈವವನ್ನು ನಂಬಿ ಚಾಕರಿ ಮಾಡಿಕೊಂಡು ಬದುಕುವ ಗುರುವ, ಬುಲ್ಲ, ನಾರು ಮುಂತಾದ ನಿಷ್ಕಲ್ಮಶ ಮನಸುಗಳು, ಅದೇ ಅರಣ್ಯ ಇಲಾಖೆಗೆ ಸೇರಿ ಊರ ಜನರಿಂದ ಛೀಮಾರಿ ಹಾಕಿಸಿಕೊಳ್ಳೋ ನಾಯಕಿ ಲೀಲಾ, ಮುರಳೀಧರ ಅನ್ನೋ ರಫ್ ಆಂಡ್ ಟಫ್ ಫಾರೆಸ್ಟ್ ಆಫೀಸರ್…. ಖಂಡಿತ ಇವೆಲ್ಲ ದಂತಕತೆಯಲ್ಲ. ಅಂದಿಗೂ ಇಂದಿಗೂ ಅಡವಿಯಂಚಿನ ತುಳುವರ ಜೀವನಗಾಥೆ. ದೈವ ಆರಾಧನೆ, ತುಳುವರ ಆಚರಣೆ, ಕಂಬಳ, ಕೋಲ, ಕೋಳಿ ಅಂಕ ಇದೆಲ್ಲವನ್ನು ಇಷ್ಟು ಚೆನ್ನಾಗಿ ಸಾದರ ಪಡಿಸೋದು ಬಹುಷಃ ರಿಷಭ್ ಶೆಟ್ರಿಂದ ಮಾತ್ರ ಸಾಧ್ಯ ಅಂದ್ರೆ ಅತಿಶಯ ಆಗಲಾರದು.
ಕಾಂತಾರ… ಜೀವಂತ ದಂತಕತೆ. ಯಾಕೆಂದರೆ ಚಿತ್ರದಲ್ಲಿ ಬರುವ ಪ್ರತೀ ಸನ್ನಿವೇಶಗಳೂ ಕೂಡಾ ನಮ್ಮವೇ ಆಗಿರುವ ಕಾರಣ ಎಲ್ಲೂ ಕಥೆ ಹೇಳಿದ್ರು, ಉತ್ಪ್ರೇಕ್ಷೆ ಮಾಡಿದ್ದು ಅಂತ ಅನಿಸಲ್ಲ ಅಷ್ಟರ ಮಟ್ಟಿಗೆ ಸಿನಿಮಾ ತುಳುನಾಡಿನ ಸೊಗಡನ್ನು ಊರಗಲ ಪಸರಿಸಿದೆ.
ಒಬ್ಬ ಬ್ರಿಲಿಯಂಟ್ ಡೈರೆಕ್ಟರ್ ಆಗಿ ರಿಷಭ್ ಶೆಟ್ಟಿ ಅವರು ಚಿತ್ರವನ್ನು ಆರ್ಟ್ ಫಿಲಂ ಕೆಟಗರಿಯಿಂದ ಕಮರ್ಷಿಯಲ್ ಸಿನಿಮಾ ಕಡೆ ಕೊಂಡೊಯ್ದಿದ್ದಾರೆ. ದೈವ ನರ್ತಕನಾಗಿ, ಹೋರಾಟದ ಕಿಚ್ಚು ಹೊತ್ತಿಸುವ ಶಿವನಾಗಿ ರಿಷಭ್ ಶೆಟ್ಟಿ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್, ನಾಯಕಿ ಸಪ್ತಮಿ ಗೌಡ ಅಚ್ಚುಮೆಚ್ಚು. ಅಚ್ಯುತ, ಕಿಶೋರ್, ಪ್ರಮೋದ್ ಶೆಟ್ಟಿ, ರಘು ಪಾಂಡೇಶ್ವರ ದೈವ ಮೈಮೇಲೆ ಬಂದಂತೆ ನಟಿಸಿದರೆ, ಮಾನಸಿ ಸುಧೀರ್, ತುಳು ರಂಗಭೂಮಿಯ ಖ್ಯಾತ ನಟರಾದ ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಜ್ಯೋತಿಶ್ ಶೆಟ್ಟಿ, ಮೈಮ್ ರಾಮ್ ದಾಸ್, ಪುಷ್ಪರಾಜ್ ಶೆಟ್ಟಿ ಬೊಳ್ಳಾರ್ ಸಹಜವಾಗಿ ನಗಿಸುತ್ತಾರೆ. ಸ್ವರಾಜ್ ಶೆಟ್ಟಿ ನೆನಪಲ್ಲಿ ಉಳಿಯುತ್ತಾರೆ. ವಿಜಯ್ ಪ್ರಕಾಶ್ ಹಾಡು ಥಿಯೇಟರ್ ನಲ್ಲಿ ಇನ್ನೂ ಚಂದ. ಮೈಮ್ ರಾಮ್ ದಾಸ್ ಅವರ ವಾ ಪೊರ್ಲುಯ ಹಾಡು ಸೂಪರ್. ಚಿತ್ರದ ಕ್ಯಾಮೆರಾ ವರ್ಕ್, ಸ್ಟಂಟ್ ಪ್ರೇಕ್ಷಕನನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ, ಕಾಂತಾರಾ ಗುಂಗು ಹಾಗೇ ಉಳಿದುಬಿಡುತ್ತದೆ. ಇದು ನಮ್ಮದೇ ಸಿನಿಮಾ, ತುಳು ಭಾಷೆಯ ಆಚರಣೆ ಮತ್ತದರ ವಿಶೇಷವನ್ನು ನಮಗೇ ತಿಳಿಸಿದ ಸಿನಿಮಾ. ಇದಕ್ಕಾಗಿ ಶೆಟ್ರಿಗೆ ಥ್ಯಾಂಕ್ಸ್… ಜೈಹೋ.!