“ಹಿಂದು ಧರ್ಮ ಜಗತ್ತಿನ ಶ್ರೇಷ್ಠ ಧರ್ಮವಾಗಿದೆ” -ರಾಜರ್ಷಿ ಡಾ. ಬಿ.ಕೆ ಮೋದಿ

ಮಂಗಳೂರು: ಹಿಂದು ಧರ್ಮ ಜಗತ್ತಿನ ಶ್ರೇಷ್ಠ ಧರ್ಮವಾಗಿದೆ ಎಂಬುದನ್ನು ಹಿಂದುಗಳು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಬೇಕು. ಹಿಂದುಗಳು ಜ್ಞಾನ ಮತ್ತು ವಿವೇಕವಂತರಾಗಿದ್ದು, ಜ್ಞಾನದ ಮೂಲಕ ನಮ್ಮಲ್ಲಿರುವ ಮಾನವ ಸಂಪನ್ಮೂಲ ಉಪಯೋಗಿಸಿ ಭಾರತ ವಿಶ್ವಗುರುವಾಗಿ ನಂ.೧ ಸ್ಥಾನಕ್ಕೇರಬೇಕು ಎಂದು ಸಿಂಗಾಪುರದ ಉದ್ಯಮಿ, ವಿಶ್ವಗುರು ಪ್ರಶಸ್ತಿ ಪುರಸ್ಕೃತ ರಾಜರ್ಷಿ ಡಾ. ಬಿ.ಕೆ ಮೋದಿ ಹೇಳಿದರು.


ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ ವತಿಯಿಂದ ನಗರದ ಶಾರದಾ ವಿದ್ಯಾಲಯದ ಭೂವರಾಹ ಸಭಾಂಗಣದಲ್ಲಿ ಶುಕ್ರವಾರ ಗೌರವ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದುಗಳು ಇನ್ನಷ್ಟು ಪ್ರವರ್ಧಮಾನಗೊಳ್ಳಬೇಕು. ಭಾರತದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿಯನ್ನು ಜಾಗೃತಗೊಳಿಸುವುದು ತಮ್ಮ ಪರಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜ್ಞಾನದ ದೀಪವನ್ನು ಬೆಳಗಿಸಿ, ಅವರನ್ನು ಸಂಘಟಿತರನ್ನಾಗಿ ಮಾಡುವುದು ತಮ್ಮ ಮುಖ್ಯ ಗುರಿ ಎಂದರು.
ಬ್ರಾಹ್ಮಣರು ಸನಾತನ ಧರ್ಮದ ಯೋಧರಾಗಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣನೂ ಸಾವಿರಾರು ಜನರಿಗೆ ದಾರಿದೀಪವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೇವಲ ಸಂಸ್ಕೃತ ಶ್ಲೋಕಗಳನ್ನು ಪಠಿಸುವುದಷ್ಟೇ ಅಲ್ಲದೆ, ಪೂಜೆ ಮತ್ತು ಆಚರಣೆಗಳ ನೈಜ ಅರ್ಥ ಹಾಗೂ ತತ್ತ್ವಗಳನ್ನು ಯುವಜನತೆಗೆ ಅವರು ಅರ್ಥೈಸಿಕೊಳ್ಳುವ ಭಾಷೆಯಲ್ಲಿ ಅಂದರೆ ಇಂಗ್ಲಿಷ್ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ವಿವರಿಸಿ, ಸನಾತನ ಧರ್ಮದ ಬಗ್ಗೆ ಅವರಲ್ಲಿ ಹೆಮ್ಮೆ ಮೂಡಿಸಬೇಕು ಎಂದರು.


ಇಂದಿನ ವೇಗದ ಯುಗದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ವ್ಯಾಕರಣ ಕಲಿಯಲು ಸಮಯವಿಲ್ಲದಿರಬಹುದು. ಆದ್ದರಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಗವದ್ಗೀತೆ, ವೇದ, ಉಪನಿಷತ್ ಹಾಗೂ ಶಂಕರಾಚಾರ್ಯರ ಭಾಷ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಬೇಕು ಎಂದು ಬಿ.ಕೆ. ಮೋದಿ ಪ್ರತಿಪಾದಿಸಿದರು.
ಮಂಗಳೂರು ಹಾಗೂ ಕರಾವಳಿ ಭಾಗದ ಅನೇಕ ಧುರೀಣರು ಜಗತ್ತಿನಾದ್ಯಂತ, ವಿಶೇಷವಾಗಿ ಅಮೆರಿಕದಲ್ಲಿ ಪ್ರಮುಖ ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಸುಂದರ ಸಮುದ್ರ ತೀರಗಳನ್ನು ಬಳಸಿಕೊಂಡು ಈ ಪ್ರದೇಶವನ್ನು ವಿಶ್ವದರ್ಜೆಯ ಶ್ರೇಷ್ಠ ಪ್ರವಾಸಿ ಹಾಗೂ ಆರ್ಥಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ವಿಶಾಲ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.
ಅಭಿನಂದನಾ ಭಾಷಣ ಮಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಬಿ.ಕೆ. ಮೋದಿ ಅವರು ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನ ಶಾಂತಿಗೆ ಸನಾತನ ಧರ್ಮ ಅಗತ್ಯ ಎಂಬುದು ಅವರ ನಿಲುವಾಗಿದೆ. ಅತ್ಯಂತ ಯಶಸ್ವಿ ಉದ್ಯಮಿಯಾದ ಅವರು ಕೈಗಾರಿಕಾ ಕ್ಷೇತ್ರದ ಎಲ್ಲಾ ವಲಯಗಳನ್ನು ಆವರಿಸಿದ್ದಾರೆ. ಮೋದಿ ಜೆರಾಕ್ಸ್ ಮೂಲಕ ಪರಿಚಿತರಾಗಿದ್ದಾರೆ. ಗಾಜಿಯಾಬಾದ್ ಎಂಬ ಚಿಕ್ಕಪಟ್ಟಣದ ಪ್ರತಿಷ್ಠಿತ ಮೋದಿ ಕುಟುಂಬದಲ್ಲಿ ಹುಟ್ಟಿದ ಬಿ.ಕೆ. ಮೋದಿ ಅವರು ಭಾರತದ ಶ್ರೇಷ್ಠ ಸಂತರ ಜತೆ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ಇಡೀ ಜಗತ್ತಿನಲ್ಲಿ ಸನಾತನ ಧರ್ಮ ಪ್ರವರ್ಧಮಾನಕ್ಕೆ ಬಂದು ಉಳಿಯಬೇಕು ಎಂಬುದು ಅವರ ಆಶಯ. ಅವರು ಹುಟ್ಟು ಬ್ರಾಹ್ಮಣ ಅಲ್ಲದಿದ್ದರೂ, ಬ್ರಾಹ್ಮಣ್ಯದ ಉನ್ನತಿಗಾಗಿ ಅವರ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮದ ಮೇಲಿನ ಮೋದಿ ಅವರ ಪ್ರೀತಿಯಿಂದ ಅಮೆರಿಕದ ಹಿಂದೂಗಳು ಅವರಿಗೆ ‘ವಿಶ್ವಗುರು’ ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ ಎಂದರು.
ಭಾರತದಲ್ಲಿ ಇಂದು ಅನ್ಯಧರ್ಮೀಯರಿಂದ ಹಿಂದು ಧರ್ಮಕ್ಕೆ ಅಪಾಯವಲ್ಲ, ಹಿಂದು ಧರ್ಮದಲ್ಲಿ ಹುಟ್ಟಿದ ಕೆಲವರು ಹಿಂದು ಧರ್ಮಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಎಚ್ಚರ ವಹಿಸಬೇಕು ಎಂದು ಹೇಳಿದರು.


ದುಬೈನ ಉದ್ಯಮಿ ಋಷಿ ವಿಜಯವ್ಯಾಸ ಮಾತನಾಡಿ, ಬಿ.ಕೆ. ಮೋದಿ ಅವರು ಶ್ರೀಮಂತ ಉದ್ಯಮಿಯಾಗಿದ್ದರೂ, ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಮತ್ತು ಟ್ರಸ್ಟಿ ಸಮೀರ್ ಪುರಾಣಿಕ್ ಉಪಸ್ಥಿತರಿದ್ದರು. ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಡಾ. ಸೀತಾರಾಮ ಭಟ್ ದಂಡತೀರ್ಥ ಸ್ವಾಗತಿಸಿದರು. ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ವಿವಿಧ ವಿಪ್ರ ಸಂಘಟನೆಗಳ ಪ್ರತಿನಿಽಗಳನ್ನು ಗೌರವಿಸಲಾಯಿತು. ಸುಧಾಕರ ರಾವ್ ಪೇಜಾವರ ಗೌರವಾರ್ಪಣೆ ಸ್ವೀಕರಿಸಿದವರ ವಿವರ ನೀಡಿದರು.

Advt

ಡಾ.ಬಿ.ಕೆ. ಮೋದಿ ಅವರು ಸಭಿಕರಿಗೆ ಓಂಕಾರವನ್ನು ೬ ಸೆಕೆಂಡುಗಳ ಕಾಲ ಸರಿಯಾದ ಕಂಪನಗಳೊಂದಿಗೆ ಉಚ್ಚರಿಸುವ ವಿಧಾನವನ್ನು ಸಭೆಯಲ್ಲಿ ಪ್ರತ್ಯಕ್ಷವಾಗಿ ಅಭ್ಯಾಸ ಮಾಡಿಸಿದರು. ಓಂಕಾರವು ಸೃಷ್ಟಿಯ ಮೂಲ ಧ್ವನಿಯಾಗಿದ್ದು, ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಂಗಳೂರಿನ ನವಭಾರತ ವೃತ್ತದಿಂದ ಶಾರದಾ ವಿದ್ಯಾಲಯವರೆಗೆ ಬಿ.ಕೆ. ಮೋದಿ ಅವರನ್ನು ಚೆಂಡೆ, ಕೊಂಬು, ಮಂಗಳವಾದ್ಯಗಳೊಂದಿಗೆ
ಮೆರವಣಿಗೆಯಲ್ಲಿ ಕರೆತರಲಾಯಿತು. ಸನ್ಮಾನದ ಬಳಿಕ ಸಂವಾದ ನಡೆಯಿತು.

error: Content is protected !!