
2,416 ಅಭ್ಯರ್ಥಿಗಳಿಗೆ ಸ್ಪಾಟ್ ಆಫರ್, 6183 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2026’ ಭರ್ಜರಿ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳು ಉದ್ಯೋಗದಾತ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಸಮಾಗಮಗೊಳಿಸುವ ಮೂಲಕ, ದೇಶದ ಪ್ರಮುಖ ಉದ್ಯೋಗ ಮೇಳಗಳ ಸಾಲಿನಲ್ಲಿ ತನ್ನ ವಿಶಿಷ್ಟ ಛಾಪನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಹಿನ್ನೆಲೆಯ 332 ಕಂಪನಿಗಳು ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಒಟ್ಟು 2416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ , 6183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈ ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ (www.alvaspragati.com) ಪ್ರಕಟಿಸಲಾಗಿದೆ. ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ತಮ್ಮ ಆಯ್ಕೆ ಅಥವಾ ಶಾರ್ಟ್‌ಲಿಸ್ಟ್‌ನ ಕುರಿತು ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಉಳಿದ ಕಂಪನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಉದ್ಯೋಗ ಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸ್‌ಎಸ್ಎಲ್‌ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಅವರಿಗೆ ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ನೇಮಕಾತಿ ಎಸ್‌ಎಮ್‌ಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿವಿಧ ಶೈಕ್ಷಣಿಕ ವಿಭಾಗಗಳು, ಕೌಶಲ್ಯಗಳು ಹಾಗೂ ಭೌಗೋಳಿಕ ಪ್ರದೇಶಗಳಿಂದ ಬಂದ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸೂಕ್ತ ಪ್ರತಿಭೆಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು ‘ಆಳ್ವಾಸ್ ಪ್ರಗತಿ’ ನೆರವಾಗುತ್ತಿದೆ ಎಂದು ಭಾಗವಹಿಸಿದ ಕಂಪೆನಿಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ನೇಮಕಾತಿ:
ಉತ್ಪಾದನಾ ವಲಯವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಕೊಡುಗೆ ನೀಡಿದ್ದು, 75 ಕಂಪನಿಗಳು ಭಾಗವಹಿಸಿ 924 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಲ್ಲಿ ಬಹುತೇಕರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಎಚ್‌ಎಲ್ ಮಾಂಡೊ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿದ್ದು, ವಾರ್ಷಿಕ ₹3.4 ಲಕ್ಷ ವೇತನ ಪ್ಯಾಕೇಜ್ ನೀಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆಯು ಚಾರ್ಟಡ್್ರ ಅಕೌಂಟೆಂಟ್ ಅಭ್ಯರ್ಥಿಯೊಬ್ಬರನ್ನು ವಾರ್ಷಿಕ ₹11 ಲಕ್ಷ ಪ್ಯಾಕೇಜ್‌ಗೆ ಶಾರ್ಟ್‌ಲಿಸ್ಟ್ ಮಾಡಿದೆ. ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು 30 ಮಹಿಳಾ ಅಭ್ಯರ್ಥಿಗಳನ್ನು ವಾರ್ಷಿಕ 73 ಲಕ್ಷ ಪ್ಯಾಕೇಜ್‌ಗೆ ಆಯ್ಕೆ ಮಾಡಿದೆ.
ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಶಾರ್ಟ್‌ಸ್ಟ್‌ಗೊಂಡಿದ್ದು, ಜೊತೆಯಲ್ಲಿ 96 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದೆ. ವುಡ್‌ಾಕ್ ಇನ್ಫೋಟೆಕ್ ಕಂಪೆನಿಯು 17 ಜನರನ್ನು ಶಾರ್ಟ್‌ಲಿಸ್ಟ್‌ಗೊಳಿಸಿದ್ದು, ಅಭ್ಯರ್ಥಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಪ್ರೋಟಾಕ್ ಸೊಲ್ಯೂಷನ್ಸ್ ಚೆನ್ನೈಯಲ್ಲಿ ಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ, ಅಂತಾರಾಷ್ಟ್ರೀಯ ಉದ್ಯೋಗಾವಕಾಶವೊಂದನ್ನು ಒರ್ವ ಅಭ್ಯರ್ಥಿಗೆ ಒದಗಿಸಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (BFSI) ಕ್ಷೇತ್ರದಲ್ಲಿ 913 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ಗೊಳಿಸಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪೆನಿಯಾದ EXL Services ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಅಕೌಂಟ್ಸ್ ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.
ಔಷಧೀಯ ಕ್ಷೇತ್ರದಲ್ಲಿ ಯೂರೋಫಿನ್ಸ್, ಆರ್.ಎಲ್. ಫೈನ್ ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್
ಸೇರಿದಂತೆ ಹಲವು ಸಂಸ್ಥೆಗಳು ಒಟ್ಟಾಗಿ 159 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ನೇಮಕಾತಿ ನಡೆದಿದ್ದು, ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮಿಟ್ ರೆಸಾರ್ಟ್ ಸಂಸ್ಥೆಯು ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್ ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳು
‘ಆಳ್ವಾಸ್ ಪ್ರಗತಿ-2026’ ಮೂಲಕ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳಿಗೂ ವೇದಿಕೆ ಕಲ್ಪಿಸಲಾಗಿದೆ. ಜಿಬಿಎಂಟಿ ಸ್ಪೆಕ್ಟರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆಯು ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದ 9 ಅಭ್ಯರ್ಥಿಗಳನ್ನು ಯುಎಇಯಲ್ಲಿನ ಉದ್ಯೋಗಾವಕಾಶಗಳಿಗೆ ಆಯ್ಕೆ ಮಾಡಿದ್ದು, ವಾರ್ಷಿಕ ₹6 ಲಕ್ಷ ಪ್ಯಾಕೇಜ್ ನೀಡಿದೆ. ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಸಂಸ್ಥೆಯು 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾದ ಯೋಜನೆಗಳಿಗೆ 13 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿದೆ.
ಸಮಾಜದ ಎಲ್ಲಾ ವರ್ಗಗಳಿಗೂ ಉದ್ಯೋಗಾವಕಾಶ ಕಲ್ಪಿಸುವ ಬದ್ಧತೆಯನ್ನು ಪ್ರದರ್ಶಿಸಿರುವ ‘ಆಳ್ವಾಸ್ ಪ್ರಗತಿ’ಯಲ್ಲಿ Grow PWD ಸಂಸ್ಥೆಯು ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್ಂಗ್ ಸಂಸ್ಥೆಯು ಆಯ್ಕೆಯಾದ ಆರು ಅಭ್ಯರ್ಥಿಗಳಿಗೆ ವಾರ್ಷಿಕ ₹8.36 ಲಕ್ಷದ ಆಕರ್ಷಕ ಪ್ಯಾಕೇಜ್ ನೀಡಿದೆ. ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಪ್ರೈವೇಟ್ ಲಿಮಿಟೆಡ್ 45 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಅವರಲ್ಲಿ ನಾಲ್ವರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ನೀಡಿದೆ.
ಉತ್ಪಾದನೆ, ಐಟಿ/ಐಟಿಇಎಸ್, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಔಷಧ, ಆರೋಗ್ಯ, ಆತಿಥ್ಯ, ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಸಂಸ್ಥೆಗಳ ವ್ಯಾಪಕ ಭಾಗವಹಿಸುವಿಕೆ ‘ಆಳ್ವಾಸ್ ಪ್ರಗತಿ’ಯನ್ನು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮ ವಲಯದ ನಡುವಿನ ಪರಿಣಾಮಕಾರಿ ಕೊಂಡಿಯಾಗಿ, ವೈವಿಧ್ಯಮಯ ಹಾಗೂ ವಿಸ್ಮತ ಉದ್ಯೋಗಾವಕಾಶಗಳ ಪರಿಸರವನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಉದ್ಯೋಗಾವಕಾಶಗಳ ನಿರಂತರ ಸಂಪರ್ಕಕ್ಕೆ ತಾಲೂಕು ಮಟ್ಟದ ಘಟಕಗಳ ಸ್ಥಾಪನೆ:
ಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗಾವಕಾಶ ದೊರೆಯುವಂತೆ ಮಾಡಲು ವಿವಿಧ ವಲಯಗಳ ನೇಮಕಾತಿ ಸಂಯೋಜಕರು ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೇಮಕಾತಿಯ ಮುಂದಿನ ಹಂತಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಹಾಗೂ ತಾಲೂಕುಗಳಲ್ಲಿ ಅಭ್ಯರ್ಥಿಗಳೊಂದಿಗೆ ನಿರಂತರ ವಿವಿಧ ಜಿಲ್ಲೆ ಸಂಪರ್ಕದಲ್ಲಿರಲು, ಅವರ ಉದ್ಯೋಗ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೂಕ್ತ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ.
‘ಆಳ್ವಾಸ್ ಪ್ರಗತಿ-2026’ ಮೂಲಕ ಲಭಿಸಿದ ಸಮಗ್ರ ಅಭ್ಯರ್ಥಿಗಳ ದತ್ತಾಂಶವನ್ನು ವರ್ಷಪೂರ್ತಿ ಸಕ್ರಿಯವಾಗಿ ಬಳಸಿಕೊಳ್ಳಲಾಗುವುದು. ಭಾಗವಹಿಸಿದ ಕಂಪೆನಿಗಳಿಂದ ಲಭ್ಯವಾಗುವ ನಿರ್ದಿಷ್ಟ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳಿಂದ ಹಿಡಿದು ಬೃಹತ್ ಪ್ರಮಾಣದ ನೇಮಕಾತಿಗಳವರೆಗೆ, ಅರ್ಹ ಅಭ್ಯರ್ಥಿಗಳನ್ನು ಸೂಕ್ತ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಡಾ.ಕುರಿಯನ್, ಮುಖ್ಯಸ್ಥರಾದ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪಿ.ಆರ್ ಒ. ದಿಶಾ ಶೆಟ್ಟಿ ಉಪಸ್ಥಿತರಿದ್ದರು.