
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವೆಂದರೆ ಕೇವಲ ಚುನಾವಣೆ, ಭಾಷಣ, ಬ್ಯಾನರ್ಗಳಷ್ಟೇ ಅಲ್ಲ, ಅದು ಜನರ ಕಣ್ಣೀರು ಒರೆಸುವ ಮಾನವೀಯತೆಯ ಕದ ತಟ್ಟುವ ಧರ್ಮ. ಕೆಲವರು ಹುದ್ದೆಗೆ ಬಂದು ಹೋಗುತ್ತಾರೆ, ಆದರೆ ಕೆಲವರು ತಮ್ಮ ಇರುವಿಕೆಯಿಂದಲೇ ಆ ಹುದ್ದೆಯನ್ನು ಅರ್ಥಪೂರ್ಣವಾಗಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿರುವ ಕಾಂಗ್ರೆಸ್ ಯುವ ಮುಖಂಡ ಹಾಮದ್ ಜಲೀಲ್ ಬದ್ರಿಯಾ ಅವರ ವ್ಯಕ್ತಿತ್ವವೇ ಅಂಥದ್ದು. ಅಧಿಕಾರ ಎನ್ನುವುದು ಅವರ ಪಾಲಿಗೆ ಖುರ್ಚಿಯಾಟವಲ್ಲ, ಬದಲಿಗೆ ಬಡವರ ಬದುಕಿಗೆ ಆಸರೆಯಾಗುವ ಪವಿತ್ರ ಜವಾಬ್ದಾರಿ.
ಧರ್ಮ ಮತ್ತು ಸೇವೆಯ ಕೈಗನ್ನಡಿ
ಕೃಷ್ಣಾಪುರದ ಬದ್ರಿಯಾ ಜುಮಾ ಮಸ್ಜಿದ್,ತೈಬಾ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಗೂ ಎಸ್ಕೆಎಸ್ಎಫ್ ಜಿಲ್ಲಾ ಖಜಾಂಚಿಯಾಗಿ ಹಾಮದ್ ಜಲೀಲ್ ಬದ್ರಿಯಾ ತೋರಿದ ಆಡಳಿತ ಶೈಲಿ ಯಾರಿಗೆ ತಾನೇ ಗೊತ್ತಿಲ್ಲ? ಕಚೇರಿ ಕಡತಗಳ ಮಧ್ಯೆ ನಲುಗುತ್ತಿದ್ದ ವಕ್ಫ್ ವ್ಯವಸ್ಥೆಯನ್ನು ಜನರ ಬಳಿಗೆ ಕೊಂಡೊಯ್ಯುವ ಹಂಬಲ ಅವರದ್ದು. ಮಾತಿನಲ್ಲಿ ನಯವಂಚನೆಯಿಲ್ಲದೆ, ಕೃತಿಯಲ್ಲಿ ಪ್ರಾಮಾಣಿಕತೆಯನ್ನು ಮೆರೆದಿರುವ ಅವರು, ವಕ್ಫ್ ಕಚೇರಿಯ ಬಾಗಿಲುಗಳು ಬಡವರು ಹಾಗೂ ಅಂಚಿಗೆ ಸರಿದ ಸಾಮಾನ್ಯ ಜನರಿಗಾಗಿ ಸದಾ ತೆರೆದಿರುವಂತೆ ಮಾಡುವ ಭರವಸೆಯ ಕಿಚ್ಚು ಹಚ್ಚಿದ್ದಾರೆ.
ನಿಸ್ವಾರ್ಥ ದಾನದ ದೊಡ್ಡ ಮನಸ್ಸು:
ಕೇವಲ ರಾಜಕೀಯ ಭಾಷಣಗಳಿಗಷ್ಟೇ ಸೀಮಿತವಾಗದೆ, ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿ ತೋರಿಸಿದವರು ಇವರು. ಮಂಗಳೂರು ತಾಲೂಕಿನ ಮುಲ್ಕಿ ಸ.ಡಿ.ಗೆ ಸೇರಿದ ಪಡುಪಣಂಬೂರು ಗ್ರಾಮದಲ್ಲಿ ಮಸೀದಿ, ಮದ್ರಸಾ ಅಭಿವೃದ್ಧಿಗಾಗಿ ಮತ್ತು ಧಾರ್ಮಿಕ ಕಾರ್ಯಕ್ಕಾಗಿ ದರ್ಗಾ ಮತ್ತು ಒಂದು ಎಕ್ರೆ ಜಾಗವನ್ನು ವಕ್ಫ್ ಸಂಸ್ಥೆ “ಹೊಸಂಗಡಿ ಕದಿಕೆ ಜುಮ್ಮಾ ಮಸೀದಿ” ಹೆಸರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗಿಫ್ಟ್ ಡೀಡ್ (ಧರ್ಮಸಾಧನ ಪತ್ರ) ಮೂಲಕ ಧಾರೆ ಎರೆದು ಬಿಟ್ಟಿದ್ದಾರೆ. ಇವರ ಈ ತ್ಯಾಗವೇ ಇವರ ನಾಯಕತ್ವದ ಅಳತೆಗೋಲು.
ಇಂದು ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಬಾಯಲ್ಲೂ “ಜಲೀಲ್ ಬದ್ರಿಯಾ ಬಂದರೆ ಕೆಲಸ ಆಗುತ್ತದೆ” ಎಂಬ ದೃಢ ವಿಶ್ವಾಸವಿದೆ. ರಾಜ್ಯಮಟ್ಟದ ಕೆಲವು ಪ್ರಮುಖ ಹುದ್ದೆಗಳು ಪಕ್ಷೇತರರ ಪಾಲಾಗುತ್ತಿರುವ ಈ ಸಂದರ್ಭದಲ್ಲಿ, ನೆಲಮಟ್ಟದಲ್ಲಿ ರಕ್ತ ಹರಿಸಿ ಪಕ್ಷ ಕಟ್ಟಿ, ಜನರ ನೋವು-ನಲಿವುಗಳಲ್ಲಿ ಜೊತೆಯಾಗಿ ನಿಂತ ಜಲೀಲ್ ಬದ್ರಿಯಾ ಕಾಂಗ್ರೆಸ್ ಪಕ್ಷದಲ್ಲಿ ಬ್ಲಾಕ್ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಜಿಲ್ಲಾ ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿಯು ರಾಜ್ಯ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿಯೂ ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ವಿಭಾಗದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿರುವ ನಿಷ್ಠಾವಂತ ನಾಯಕನಿಗೆ ವಕ್ಫ್ ಸಮಿತಿಯ ಸಾರಥ್ಯ ಸಿಗಬೇಕು ಎಂಬ ಒತ್ತಾಯ ಜೋರಾಗಿದೆ.
ಒಟ್ಟಿನಲ್ಲಿ ಜಲೀಲ್ ಬದ್ರಿಯಾ ಅವರ ಆಯ್ಕೆ ಕೇವಲ ಒಂದು ಕುರ್ಚಿಯ ಅಲಂಕಾರವಲ್ಲ; ಅದು ವಕ್ಫ್ ವ್ಯವಸ್ಥೆಗೆ ಹೊಸ ದಿಕ್ಕು, ಆಡಳಿತಕ್ಕೆ ಅಚಲ ಶಿಸ್ತು ಮತ್ತು ದಕ್ಷಿಣ ಕನ್ನಡದ ಜನ ಸಾಮಾನ್ಯರಿಗೆ ಸಿಗುವ ಹೊಸ ಬೆಳಕಿನ ಭರವಸೆ. ಈಗ ಎಲ್ಲರ ಕಣ್ಣುಗಳು ಹೈಕಮಾಂಡ್ನ ಅಂತಿಮ ನಿರ್ಧಾರದತ್ತ ನೆಟ್ಟಿವೆ!