ಬಂಟ್ವಾಳ ದರೋಡೆ ಪ್ರಕರಣ: ಮೂವರ ಬಂಧನ

ಮಂಗಳೂರು: ನಗರದ ಪಡೀಲ್-ಕಣ್ಣೂರಿನ ಸಿಮೆಂಟ್ ಮತ್ತು ಕಬ್ಬಿಣ ಮಾರಾಟ ಸಂಸ್ಥೆಯ ಉದ್ಯೋಗಿ ಮಯ್ಯದಿ ಎಂಬವರಿಗೆ ತಲವಾರು ತೋರಿಸಿ ಬೆದರಿಸಿ ರೂ. 8.35 ಲಕ್ಷ ನಗದು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ರಾಜ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಮತ್ತು ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಎಂದು ಹೆಸರಿಸಲಾಗಿದೆ.
ಮಯ್ಯದಿ ಆ.20ರಂದು ಮಧ್ಯಾಹ್ನ 1 ಗಂಟೆಗೆ ಸಂಸ್ಥೆಯ ವ್ಯವಹಾರದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸಿ ಬಂಟ್ವಾಳ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್‌ನಲ್ಲಿ ಬರುತ್ತಿರುವಾಗ ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ 2 ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ತಲವಾರು ತೋರಿಸಿ, ಬೆದರಿಸಿ ಅವರ ಬಳಿಯಿದ್ದ ರೂ. 8,35,000 ನಗದು ಹಣವನ್ನು ದರೋಡೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!