
ಬಂಟ್ವಾಳ: ದಕ್ಷಿಣ ಭಾರತದ ಪ್ರಮುಖ ಮಸೀದಿಯೂ ಸರ್ವಧರ್ಮೀಯರು ಪಾಲ್ಗೊಳ್ಳುವ ಸಂದರ್ಶನಾ ಕೇಂದ್ರವಾಗಿರುವ ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕರು ಹಾಗೂ ಪವಾಡ ಪುರುಷರೂ ಆದ ಹತ್ ಸಂಖ್ಯದ್ ಬಾಬಾ ಫಕ್ರುದ್ದೀನ್ ವಲಿ (ಐ.ಸಿ) ರವರ ಸ್ಮರಣಾರ್ಥ ವರ್ಷಂಪ್ರತಿ ನಡೆಸಲ್ಪಡುವ ಪ್ರಖ್ಯಾತ 754 ನೇ ಮಾಲದಾ ಉರೂಸ್ ಇದೇ ಬರುವ ನವೆಂಬರ್ 21 ರಿಂದ 25ರ ತನಕ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಹಾಜಿ ಪಿ.ಬಿ.ಅಬ್ದುಲ್ ಹಮೀದ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪ್ರಥಮ ದಿನವಾದ ನವೆಂಬರ್ 21 ಶನಿವಾರ ಮಗ್ರಿಬ್ ನಮಾಝಿನ ಬಳಿಕ ಅಸ್ವಯ್ಯದ್ ಜಲ್ಫರ್ ಸ್ವಾದಿಕ್ ತಂಬಳ್, ಕುಂಬೋಳ್ ರವರ ನೇತೃತ್ವದಲ್ಲಿ ಜಲಾಲಿಯ್ಯಃ ರಾತೀಬ್ ನಡೆಯಲಿದ್ದು, ನವೆಂಬರ್ 22 ಭಾನುವಾರ ಭಂಡಾರದ ಹರಕೆ ಪ್ರಾರಂಭ ಹಾಗೂ ಮಗ್ರಿಬ್ ನಮಾಝಿನ ಬಳಿಕ ಬುರ್ದಾ ಮಜಿಸ್ ನಡೆಯಲಿದ್ದು ಅಸ್ವಯ್ಯದ್ ಮುಖಾರ್ ತಂಬಟ್, ಕುಂಬೋಳ್ ರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ನವೆಂಬರ್ 23 ಸೋಮವಾರ ಬೆಳಗ್ಗೆ 8 ರಿಂದ ಊರಪರವೂರ ಮಹನೀಯರ ಕೊಡುವಿಕೆಯಿಂದ ಮಾಲಿದಾ ಹರಕೆ ಪ್ರಾರಂಭವಾಗಲಿದ್ದು, ಮಗ್ರಿಬ್ ನಮಾಝಿನ ಬಳಿಕ ಬದ್ರುಸ್ವಾದಾತ್ ಸಯ್ಯದ್ ಇಬ್ರಾಹೀಂ ಖಲೀಲ್ ಬುಖಾರಿ ತಂಬಳ್ ಕಡಲುಂಡಿ ರವರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ನೌಫಲ್ ಸಖಾಫಿ ಕಳಸ ರವರ ಧಾರ್ಮಿಕ ಪ್ರವಚನ ನಡೆಯಲಿದೆ. ನವೆಂಬರ್ 24 ಮಂಗಳವಾರ ಬೆಳಗ್ಗೆ 8 ಕ್ಕೆ ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ, ಹಾಗೂ ಮಗ್ರಿಬ್ ನಮಾಝಿನ ಬಳಿಕ ಬಾಝಿ ಸಯ್ಯದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ಬಾಅಲವಿ ತಂಬಳ್ ರವರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಕರೀಂ ಫೈಝಿ ಕುಂತೂರು ರವರ ಧಾರ್ಮಿಕ ಪ್ರವಚನ ನಡೆಯಲಿದೆ. ಸಮಾರೋಪ ಸಮಾರಂಭವಾದ ನವೆಂಬರ್ 25 ಬುಧವಾರ ಹಗಲು ಸಾಮೂಹಿಕ ಪ್ರಾರ್ಥನೆ ಹಾಗೂ ಮಧ್ಯಾಹ್ನ 1 ರಿಂದ ಸಂಜೆ 5ರ ತನಕ ಕಂದೂರಿ ಊಟ ವಿತರಿಸಲ್ಪಡಲಿದ್ದು, ಈ ಐದು ದಿನಗಳಲ್ಲಿ ಪ್ರಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ಮುಂತಾದವುಗಳು ನಡೆಯಲಿದ್ದು ಸರ್ವ ಧರ್ಮೀಯರಾದ ಲಕ್ಷಾಂತರ ಜನರು ಸೇರಲಿದ್ದಾರೆ. ಬೆಳಿಗ್ಗೆಯಿಂದ ಸಂಜೆ 6 ಗಂಟೆಯ ತನಕ ಮಾತ್ರ ಸ್ತ್ರೀಯರಿಗೆ ಉರೂಸ್ ನಲ್ಲಿ ಭಾಗವಹಿಸಲು ಅವಕಾಶವಿದ್ದು ಹಾಗೂ ಫ್ಯಾನ್ಸಿ ಟೋಯ್ಸ್ ಗಳ ವ್ಯಾಪಾರವನ್ನೂ ಮನೋರಂಜನಾ ಕಾರ್ಯಕ್ರಮಗಳನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ 5 ದಿನಗಳಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ M.K. ಸಿನಾನ್ ಸಖಾಫಿ, ಧರ್ಮಗುರುಗಳಾದ ಪಿ.ಎಸ್ ತ್ವಾಹಾ ಸಅದಿ, ಉಪಾಧ್ಯಕ್ಷ ಇಬ್ರಾಹೀಂ ಜಿ. ಅಜಿಲಮೊಗರು, ಆದಂ ಕುಂಞ ನಡುಮೊಗರು, ಸ್ವಾದಿಕ್ ಇಂಜಿನಿಯರ್ ಮಂಗಳೂರು ಉಪಸ್ಥಿತರಿದ್ದರು.