
2026-27ನೇ ಸಾಲಿನ ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳು, ಬರ ಪರಿಸ್ಥಿತಿ, ಜಾನುವಾರು ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮಂಗಳೂರು ತಾಲೂಕು ಟಾಸ್ಕ್ ಫೋರ್ಸ್ ಸಭೆಯು ಮಾನ್ಯ ಶಾಸಕ ಡಾ. ಭರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನೀರಿನ ಅಭಾವ ಉಂಟಾಗುವ ಪ್ರದೇಶಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಡಾ. ಭರತ್ ಶೆಟ್ಟಿ, ಅಗತ್ಯವಿರುವ ಓವರ್‌ಹೆಡ್ ಟ್ಯಾಂಕ್, ಕೊಳವೆಬಾವಿ, ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕದ ಮಾಹಿತಿಯನ್ನು ತಕ್ಷಣ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿರುವ ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸಿ, ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದ ಅವರು, ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಯಾವುದೇ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಸದಾ ಸನ್ನದ್ಧವಾಗಿರಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
