ಸುಳ್ಯ: ಗೃಹಿಣಿಯ ಅನುಮಾನಾಸ್ಪದ ಸಾವು; ಮಾವ, ಅತ್ತೆ, ನಾದಿನಿ ಬಂಧನ!

ಸುಳ್ಯ: ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದಲ್ಲಿ ಆಕೆಯ ತಾಯಿ ನೀಡಿರುವ ದೂರಿನ ಮೇರೆಗೆ ಮೃತಳ ಮಾವ, ಅತ್ತೆ ಹಾಗೂ ನಾದಿನಿಯನ್ನು ಸುಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ (43) ಎಂಬುವರ ಮಗಳು ಫಾತಿಮತ್‌ ನಿಶಾನ ಮೃತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ ಸಿ.ಪಿ. ಅಲವಿ (54), ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. (29) ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಫಾತಿಮತ್‌ ನಿಶಾನ ಅವರ ವಿವಾಹ ನೆರವೇರಿತ್ತು. ಜುಲೈ 18, 2026ರಂದು ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಫೋನ್ ಮಾಡಿ ಮಾತನಾಡುವಾಗ, ಗಂಡನ ಮನೆಯಲ್ಲಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದರು. ತಾಯಿ-ಮಗಳ ಸಂಭಾಷಣೆ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮಾವ ಅಲವಿ, ನಿಶಾನ ಅವರ ಕೈಯಿಂದ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ತಾಯಿ ಜುಬೈದ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.


ತಾಯಿ ಜುಬೈದಾ ಅವರು ಮಗಳನ್ನು ನೋಡಲು ಆಕೆಯ ಮನೆಗೆ ಧಾವಿಸಿದ್ದು ಈ ವೇಳೆ ನಿಶಾನ ಮೃತಪಟ್ಟಿರುವ ಸುದ್ದಿ ತಿಳಿದುಬಂದಿದೆ. ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಸೇರಿಕೊಂಡೇ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆಂದು ತಾಯಿ ಜುಬೈದಾ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

error: Content is protected !!