ಜು.26: ಕದ್ರಿ ಹಿಲ್ಸ್ ನ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಜು.26ರಂದು ಕದ್ರಿ ಹಿಲ್ಸ್ ನ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಮತ್ತು ನೂತನವಾಗಿ ಸ್ಥಾಪಿಸಲಾದ ಟಿ-55 ಯುದ್ಧ ಟ್ಯಾಂಕ್ ಅನಾವರರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಾರ್ಜಂಟ್ ಶ್ರೀಕಾಂತ್‌ ಶೆಟ್ಟಿ ಬಾಳ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಗ್ಗೆ 9.15ಕ್ಕೆ ಯುದ್ಧ ಟ್ಯಾಂಕ್‌ನ ಅನಾವರಣ ನಡೆಯಲಿದೆ. ಬಳಿಕ ರಾಷ್ಟ್ರ ಸೇವೆಯಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ವೀರ ಯೋಧರಿಗೆ ಪುಷ್ಪ ನಮನ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾಜಿ ಯೋಧ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಟಿ-55 ಯುದ್ಧ ಟ್ಯಾಂಕ್ 1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಬಾಂಗ್ಲಾ ವಿಮೋಚನೆಗೆ ಕಾರಣವಾದ ಭಾರತದ ನಿರ್ಣಾಯಕ ವಿಜಯಕ್ಕೆ ಕೊಡುಗೆ ನೀಡಿತ್ತು. ಯುದ್ಧ ಸ್ಮಾರಕದಲ್ಲಿ ಇದರ ಪ್ರತಿಷ್ಠಾಪನೆ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ವೃತ್ತಿಪರತೆಗೆ ಶಾಶ್ವತ ಗೌರವವಾಗಿ ನಿಲ್ಲಲಿದೆ. ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೆ ಪ್ರೇರಣೆಯ ಮೂಲವಾಗಲಿದೆ ಎಂದರು.


ಸಂಘದ ಮಾಜಿ ಅಧ್ಯಕ್ಷ ಕ್ಯಾ.ನಿಟ್ಟೆಗುತ್ತು ಶರತ್ ಭಂಡಾರಿ, ಪ್ರಕಾರ್ಯದರ್ಶಿ ಕ್ಯಾದೀಪಕ್‌ ಅಡ್ಯಂತಾಯ, ನೌಕಾ ಪಡೆ ನಿವೃತ್ತ ಯೋಧ ಸುಧೀರ್ ಪೈ, ಸಂಘದ ಉಪಾಧ್ಯಕ್ಷ ಕ್ಯಾ.ಎ.ಕೆ.ಜಯಚಂದ್ರನ್ ಉಪಸ್ಥಿತರಿದ್ದರು.

error: Content is protected !!