
ದೆಹಲಿ: ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಜಾಲವನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭದೀಪ್ ಸಿಂಗ್, ಗುರ್ಜಂತ್ ಸಿಂಗ್, ಸಜನ್ ಸಿಂಗ್ ಹಾಗೂ ಗಗನ್‌ಪ್ರೀತ್ ಸಿಂಗ್ ಹೆಸರಿನ ಶಂಕಿತರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತರು ಐಎಸ್‌ಐ ಹ್ಯಾಂಡ್ಲರ್ ಶಹಜಾದ್ ಭಟ್ ಹಾಗೂ ಆತನ ಸಹಚರರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಗುರುತು ಪತ್ತೆಯಾಗದಂತೆ ನೋಡಿಕೊಳ್ಳಲು ಪಾಕಿಸ್ತಾನದಲ್ಲಿದ್ದ ಹ್ಯಾಂಡ್ಲರ್‌ಗಳು ಒದಗಿಸಿದ್ದ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕವೇ ಪರಸ್ಪರ ಸಂಪರ್ಕದಲ್ಲಿದ್ದು, ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳು ದೆಹಲಿ–ಎನ್‌ಸಿಆರ್‌ನ ಪ್ರಮುಖ ಸಾರ್ವಜನಿಕ ಸ್ಥಳಗಳು ಮತ್ತು ಜನಸಂದಣಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಗ್ರ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ವಿದೇಶಿ ಪಿಸ್ತೂಲ್, ಜೀವಂತ ಗುಂಡುಗಳು, ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
