
ಬೆಂಗಳೂರು: ಪ್ರೇಮಿ ಜೊತೆ ಸೇರಿ ಮಗಳೇ ತನ್ನ ಅಪ್ಪ, ಅಮ್ಮ ಹಾಗೂ ಒಡಹುಟ್ಟಿದ ಸಹೋದರಿಯನ್ನು ಭೀಕರವಾಗಿ ಕೊಲೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಹೃದಯವಿದ್ರಾವಕ ಘಟನೆ ಕೆಆರ್‌ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು ಪೊಲೀಸರು ಪರಾರಿಯಾಗಿರುವ ಜೋಡಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಜೋಡಿ ಕೃತ್ಯ ಎಸಗಿದ ಬಳಿಕ ಏನೂ ನಡೆದೇ ಇಲ್ಲವೆಂಬಂತೆ ಫ್ಲ್ಯಾಟ್ ನಿಂದ ಹೊರಹೋಗಿರುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೋಮಸುಂದರ್(55),ಅವರ ಪತ್ನಿ ಮುತ್ತುಲಕ್ಷ್ಮೀ(49) ಹಾಗೂ ಪುತ್ರಿ ಸುಪ್ರಿಯಾ(20) ಕೊಲೆಯಾದವರು. ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಸೇರಿಕೊಂಡು ಹತ್ಯೆ ಮಾಡಿದ್ದಾರೆ.
ಲಿವಿಂಗ್ ರಿಲೇಷನ್ ಪ್ರಶ್ನಿಸಿದ್ದೇ ತಪ್ಪಾಯ್ತು!
ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಶೀಗೆಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮಂಟ್‌ನಲ್ಲಿ ಲಿವ್‌ಇನ್ ರಿಲೇಶನ್‌ನಲ್ಲಿದ್ದಳು. ಇವರ ಸಂಬಂಧಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹಲವಾರು ಬಾರಿ ಮಗಳಿಗೆ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಪೋಷಕರು ಹಾಗೂ ಕಿರಿಯ ಮಗಳು ಸುಪ್ರಿಯಾ ರಾತ್ರಿ ಸುಮಾರು 9.30 ರಿಂದ 10 ಗಂಟೆ ಸುಮಾರಿನಲ್ಲಿ ಅವರು ವಾಸವಿದ್ದ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಮನೆಗೆ ಬಂದಿದ್ದ ಪೋಷಕರ ಜೊತೆ ಮಗಳು ಹಾಗೂ ಆಕೆಯ ಪ್ರಿಯಕರ ಕೆನತ್ ಜಗಳವಾಡಿದ್ದಾರೆ.
ಕೆಲ ಸಮಯದ ಬಳಿಕ ಅಪಾರ್ಟ್‌ಮೆಂಟ್‌ನಿಂದ ಶ್ವೇತಾ ಮತ್ತು ಯುವಕ ಓಡಿ ಹೋಗುತ್ತಿರುವುದನ್ನು ನೋಡಿ ಸ್ಥಳೀಯರು ಏನಾಗಿದೆ ಎಂದು ತಿಳಿಯದೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಕೆಆರ್‌ಪುರಂ ಠಾಣೆ ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೂವರು ಕೊಲೆಯಾಗಿ ಬಿದ್ದಿರುವುದನ್ನು ಕಂಡು ಒಂದು ಕ್ಷಣ ಆತಂಕಗೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೆನತ್ ನನ್ನು ಪ್ರೀತಿಸುತ್ತಿದ್ದ ಶ್ವೇತಾ ನಮಗೆ ಮದುವೆ ಮಾಡುವಂತೆ ಹಾಗೂ ಆಸ್ತಿಯಲ್ಲಿ ಭಾಗ ಕೊಡಬೇಕೆಂದು ಪೋಷಕರಿಗೆ ಪೀಡಿಸುತ್ತಿದ್ದರು. ಈ ವಿಚಾರವಾಗಿ ತಂದೆ ಸೋಮಸುಂದರ್ ನಿರಾಕರಿಸಿ ಮನೆಯಿಂದ ಅವರನ್ನು ಹೊರಗೆ ಹೋಗುವಂತೆ ಎಚ್ಚರಿಕೆ ನೀಡಿದ್ದರು.
ಇದೇ ಕೋಪದಿಂದ ಪೋಷಕರೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೆನತ್ ಚಾಕುವಿನಿಂದ ಮೊದಲು ಸೋಮಸುಂದರ್ ಅವರಿಗೆ ಹಲವು ಬಾರಿ ಇರಿದಿದ್ದಾನೆ. ಇದನ್ನು ಕಂಡ ಪತ್ನಿ ಮುತ್ತುಲಕ್ಷ್ಮೀ ತಡೆಯಲು ಮಧ್ಯೆ ಹೋದಾಗ ಅವರ ಮೇಲೆಯೂ ಕೂಡ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದಾಗ ತೀವ್ರರಕ್ತಸ್ರಾವವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.