
ಮಂಗಳೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಮಾನಸಿಕ ಸ್ಥೆರ್ಯಕ್ಕೆ ಸಂಬಂಧಿಸಿದ ಸವಾಲುಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಮ, ಸೈಬರ್ ಅಪರಾಧಗಳು, ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆಯುವ ವಂಚನೆಗಳು, ಪರೀಕ್ಷಾ ಒತ್ತಡದಿಂದ ಉಂಟಾಗುವ ಆತ್ಮಹತ್ಯೆಗಳು ಹಾಗೂ ವಿವಿಧ ರೀತಿಯ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಅಗತ್ಯ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ, ಜುಲೈ ತಿಂಗಳ ಪೂರ್ತಿ ಮಂಗಳೂರಿನ ವಿವಿಧ ಹೋಬಳಿ ಮಟ್ಟದ ಶಾಲೆಗಳಲ್ಲಿ “ಬಾಲಿಕಾ ಜಾಗೃತಿ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಅಭಿಯಾನದ ಮೂಲಕ ಹೆಣ್ಣುಮಕ್ಕಳಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು, ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸೈಬರ್ ಸುರಕ್ಷತೆ ಹಾಗೂ ಜೀವನ ಕೌಶಲ್ಯಗಳ ಕುರಿತು ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಪ್ರಸಿದ್ಧ ವೈದ್ಯರು, ಉನ್ನತ ನ್ಯಾಯವಾದಿಗಳು ಹಾಗೂ ಅನುಭವಿ ಶಿಕ್ಷಣ ತಜ್ಞರು ವಿದ್ಯಾರ್ಥಿನಿಯರೊಂದಿಗೆ ನೇರ ಸಂವಾದ ನಡೆಸಿ, ಅವರಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
“ಜಾಗೃತ ಹೆಣ್ಣುಮಗು – ಸುರಕ್ಷಿತ ಸಮಾಜದ ಅಡಿಪಾಯ” ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಅಭಿಯಾನವು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ, ಉತ್ತಮ ನಾಗರಿಕರಾಗಿ ಬೆಳೆಯಲು ಅಗತ್ಯವಾದ ಕಾನೂನು ಮತ್ತು ಸಾಮಾಜಿಕ ಅರಿವನ್ನು ಮೂಡಿಸುವ ಮಹತ್ತ್ವದ ಪ್ರಯತ್ನವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಲೋಬೋ ಫೌಂಡೇಶನ್ (ರಿ) ಸಂಸ್ಥಾಪಕ ಜಾನ್ ವಿಲ್ಸನ್ ಲೋಬೋ, ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷೆ ಡಾ.ಸಂಶದ್ ಕುಂಜತ್ತಬೈಲ್, ಸಮಾಜಕಾರ್ಯ ಮತ್ತು ಶಿಕ್ಷಣ ತಜ್ಞ ಡಾ. ಅನುರಾಧ ಶೆಟ್ಟಿ ಹಾಗೂ ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಯದರ್ಶಿ ಹನಿಷ ಸವಾದ್ ಉಪಸ್ಥಿತರಿರುವರು.