ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಅದಿತಿ’ ಚಲನಚಿತ್ರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ

ಮಂಗಳೂರು: ಸಾಹಿತ್ಯ ಲೋಕದಲ್ಲಿ 2 ದಶಕಗಳಿಂದ ಸೃಜನಶೀಲ ಬರವಣಿಗೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಲೇಖಕ, ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್ ಅವರ ಕಲ್ಪನೆ ಹಾಗೂ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಅದಿತಿ’ ಚಲನಚಿತ್ರ ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಂಡಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭಾಶಯ ಸಲ್ಲಿಸಿದರು. “ನಿರ್ದೇಶಕ ಪಿ.ವಿ. ಪ್ರದೀಪ್ ಕುಮಾರ್ ಅವರು ಈವರೆಗೆ 50ಕ್ಕೂ ಹೆಚ್ಚು ಕಾದಂಬರಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವುಗಳಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳು ನಾಡಿನ ಅತ್ಯಂತ ಜನಪ್ರಿಯ ಹಾಗೂ ಹೆಸರಾಂತ ಪತ್ರಿಕೆಗಳಾದ ‘ಸುಧಾ’, ‘ತರಂಗ’, ‘ಮಂಗಳ’, ‘ಕರ್ಮವೀರ’ ಸೇರಿದಂತೆ ಹಲವು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಲಕ್ಷಾಂತರ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರ ಜನಪ್ರಿಯ ಕಾದಂಬರಿ ‘ಮರಣ ಶಾಸನ’ ತೆಲುಗು ಭಾಷೆಗೆ ಅನುವಾದಗೊಂಡು ಅಲ್ಲಿಯೂ ಕೂಡ ಓದುಗರ ಬಳಗವನ್ನೇ ಹೊಂದಿದವರು“ ಎಂದರು.

ನಿರ್ದೇಶಕರ ಕುರಿತು:
ಈ ಹಿಂದೆ ‘ಬದಲಾಗದವರು’ ಎಂಬ ವಿಭಿನ್ನ ಕಥಾಹಂದರದ ಕಿರುಚಿತ್ರವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದ ಪಿ.ವಿ.ಪ್ರದೀಪ್ ಕುಮಾರ್ ಅವರು ಆ ಯಶಸ್ಸಿನ ಬೆನ್ನಲ್ಲೇ ಈಗ ಬೆಳ್ಳಿಪರದೆಯ ಮೇಲೆ ದೊಡ್ಡ ಮಟ್ಟದ ಕ್ಯಾನ್ವಾಸ್‌ನಲ್ಲಿ ಮೂಡಿಬರುತ್ತಿರುವ ಅವರ ಎರಡನೇ ಚಿತ್ರವೇ ‘ಅದಿತಿ’. ನಾರಿ ಮುನಿದರೆ ಸಾಮ್ರಾಜ್ಯವೇ ಧೂಳಿಪಟ” ಎಂಬ ಬಲಿಷ್ಠವಾದ ಟ್ಯಾಗ್‌ಲೈನ್ ಹೊಂದಿರುವ ‘ಅದಿತಿ’ ಚಿತ್ರವು ಒಂದು ವಿಭಿನ್ನ ಶೈಲಿಯ ಸಸ್ಪೆನ್ಸ್, ಆಕ್ಷನ್ ಹಾಗೂ ಎಮೋಷನಲ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಚಿತ್ರದಲ್ಲಿ ಕಥೆಗೆ ಪೂರಕವಾದ ಸಸ್ಪೆನ್ಸ್ ಮತ್ತು ರಹಸ್ಯಗಳ ಜೊತೆಗೆ, ಅತ್ಯಂತ ಆಪ್ತವಾಗಿ ಕಾಡುವ ಪ್ರೇಮಕಥೆಯೂ ಇದೆ. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಚಿತ್ರದ ಮುಖ್ಯ ಪಾತ್ರಧಾರಿಗಳ ತೀವ್ರವಾದ ಭಾವನೆಗಳು, ಆಧುನಿಕ ತಂತ್ರಜ್ಞಾನದ ಎಲಿಮೆಂಟ್ಸ್ ಹಾಗೂ ಹಿನ್ನೆಲೆಯಲ್ಲಿ ಕಾಣುವ ಸಸ್ಪೆನ್ಸ್ ನೆರಳು ಮತ್ತು ಪಾತ್ರಗಳ ಗಂಭೀರ ನೋಟವು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.


ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ರೇಮಂಡ್ ಡಿಕುನ್ಹ ತಾಕೋಡೆ, ನಿರ್ಮಾಪಕಿ ಸುನಿತಾ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

error: Content is protected !!